ಮೈಸೂರು,ಮಾ,10,2020(www.justkannada.in): ಕಳೆದ ಎರಡು ದಿನಗಳ ಹಿಂದಷ್ಟೇ 12 ಪಕ್ಷಿಗಳು ಸಾವನ್ನಪ್ಪಿದ್ದು ಹಕ್ಕಿಜ್ವರದ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿತ್ತು. ಇದೀಗ ಹಕ್ಕಿಜ್ವರದ ಭೀತಿ ಮತ್ತಷ್ಟು ಹೆಚ್ಚಾಗಿದ್ದು ಪಕ್ಷಿಗಳ ಮರಣ ಮೃದಂಗ ಮುಂದುವರೆದಿದೆ.
ಹೌದು ಮೈಸೂರಿನ ವಾರ್ಡ್ ನಂ.1ರ ವ್ಯಾಪ್ತಿಯ ಹೆಬ್ಬಾಳ ಕೆರೆ ಸುತ್ತಮುತ್ತ ಪ್ರತೀ ದಿನ ಕೊಕ್ಕರೆಗಳ ಸಾವನ್ನಪ್ಪುತ್ತಿವೆ. ಕಳೆದ 20ದಿನಗಳಿಂದ ಸುಮಾರು 50ಕ್ಕೂ ಹೆಚ್ಚು ಕೊಕ್ಕರೆಗಳ ಮೃತಪಟ್ಟಿವೆ. ಮರಗಳ ಮೇಲೆಯೇ ಕೊಕ್ಕರೆಗಳು ಸತ್ತು ಬೀಳುತ್ತಿದ್ದು, ಇದರಿಂದಾಗಿ ಹಕ್ಕಿಜ್ವರದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಪಾಲಿಕೆ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತ ಕೊಕ್ಕರೆಗಳನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿ ತಿಂಗಳಾದರೂ ಇದಕ್ಕೆ ಕಾರಣ ಪತ್ತೆಹಚ್ಚಿಲ್ಲ.
ವಾರ್ಡ್ ವ್ಯಾಪ್ತಿಯಲ್ಲಿ ಪ್ರತಿದಿನ ಪಕ್ಷಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸುವಂತೆ ಪಾಲಿಕೆ ಸದಸ್ಯರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
ಗೂಡಿನಲ್ಲಿ ಕೂಡಿ ಹಾಕಿದ್ದ ಕೋಳಿಗಳು ದಿನ ಬೆಳಗಾಗುವುದರೊಳಗೆ ಸಾವು….
ಇನ್ನೊಂದೆಡೆ ಕೋಳಿಗಳಿಗೂ ಹಕ್ಕಿಜ್ವರದ ಭೀತಿ ಎದುರಾಗಿದ್ದು ಮೈಸೂರಿನ ಮೇಟಗಳ್ಳಿಯ ಮಂಚಮ್ಮ ದೇಗುಲದ ಬಳಿಯ ನಿವಾಸಿ ರಾಮಣ್ಣ ಎಂಬುವರಿಗೆ ಸೇರಿದ 12 ಕೋಳಿಗಳು ದಿನ ಬೆಳಗಾಗುವುದರೊಳಗೆ ಸಾವನ್ನಪ್ಪಿವೆ. ಕಳೆದ ಸಂಜೆ ಎಲ್ಲಾ ಕೋಳಿಗಳನ್ನು ಗೂಡಿನಲ್ಲಿ ಕೂಡಿ ಹಾಕಲಾಗಿತ್ತು. ಆದರೆ ಇಂದು ಬೆಳಗಿನ ಜಾವ ಕೋಳಿಗಳು ಎಂದಿನಂತೆ ಕೂಗು ಹಾಕದೇ ಇರುವುದರಿಂದ ಅನುಮಾನಗೊಂಡು ಹೋಗಿ ನೋಡಿದಾಗ ಎಲ್ಲಾ ಕೋಳಿಗಳು ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿದೆ.
ಮುಂದಿನ ವಾರ ನಡೆಯುವ ಗ್ರಾಮ ದೇವತೆಯ ಹಬ್ಬಕ್ಕೆಂದು ರಾಮಣ್ಣ ಕುಟುಂಬ ಸದಸ್ಯರು ಕೋಳಿಗಳನ್ನು ಸಾಕಿದ್ದರು. ಕಳೆದ ಹಲವಾರು ವರ್ಷಗಳಿಂದ ಕೋಳಿಗಳನ್ನು ಸಾಕುತ್ತಾ ಬಂದಿದ್ದು, ಇದೇ ಮೊದಲ ಬಾರಿ ಏಕಾಏಕಿ ಕೋಳಿಗಳು ಸಾವನ್ನಪ್ಪಿರುವುದು ಆತಂಕಸೃಷ್ಠಿಸಿದೆ
ಇನ್ನು ಕೋಳಿಗಳು ಹಕ್ಕಿಜ್ವರದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಕೋಳಿಗಳ ಹಠಾತ್ ಸಾವಿನಿಂದ ರಾಮಣ್ಣ ಕುಟುಂಬ ಸದಸ್ಯರು ಆತಂಕಗೊಂಡಿದ್ದಾರೆ. ಕೊಕ್ಕರೆ ಮತ್ತು ಕೋಳಿಗಳ ಸಾವಿನಿಂದ ನಗರದೆಲ್ಲೆಡೆ ಹಕ್ಕಿಜ್ವರದ ಆತಂಕ ಹೆಚ್ಚಾಗಿದೆ.
Key words: mysore- bird flu- Fears – Stork-dead