ಮೈಸೂರು,ನ,19,2019(www.justkannada.in): ರಾಜ್ಯದ 15 ಕ್ಷೇತ್ರಗಳ ಉಪಚುನಾವಣಾ ಕಣದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ಭಾರಿ ಕುತೂಹಲ ಮೂಡಿಸಿರುವ ಹುಣಸೂರು ಕ್ಷೇತ್ರದಲ್ಲಿ ಮೂರು ಪಕ್ಷಗಳ ನಡುವೆ ಪೈಪೋಟಿ ಉಂಟಾಗಿದೆ.
ಈ ಮಧ್ಯೆ ಹುಣಸೂರು ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸದಲ್ಲಿರುವ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಇಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಜಿ.ಟಿ ದೇವೇಗೌಡರನ್ನ ಭೇಟಿಯಾಗಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಸದ್ಯ ಮಾಜಿ ಸಚಿವ ಜಿ.ಟಿ ದೇವೇಗೌಡರು ಜೆಡಿಎಸ್ ಕಾರ್ಯಕ್ರಮಗಳಿಂದ ದೂರು ಉಳಿದಿರುವುದು ಗೊತ್ತೆ ಇದೆ. ಜತೆಗೆ ಹುಣಸೂರು ಕ್ಷೇತ್ರ ಉಪಚುನಾವಣಾ ವಿಚಾರದಲ್ಲಿ ತಟಸ್ಥವಾಗಿರುವ ಮಾಜಿ ಸಚಿವ ಜಿ.ಟಿ ದೇವೇಗೌಡರ ಬೆಂಬಲ ಸಿಕ್ಕರೇ ಗೆಲುವಿಗೆ ಅನುಕೂಲವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.
ಹೀಗಾಗಿ ಇಂದು ಹೆಚ್.ವಿಶ್ವನಾಥ್ ಅವರು ಜಿ.ಟಿ ದೇವೇಗೌಡರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಜಿಟಿಡಿ ಭೇಟಿ ಬಳಿಕ ಮಾಧ್ಯಮದ ಜತೆ ಮಾತನಾಡಿದ ಹೆಚ್.ವಿಶ್ವನಾಥ್, ನನ್ನ ಮತ್ತು ಜಿಟಿ ದೇವೇಗೌಡರ ನಡುವೆ ಅವಿನಾಭಾವ ಸಂಬಂಧವಿದೆ. ಚುನಾವಣೆಯಲ್ಲಿ ನಮಗೆ ಬೆಂಬಲ ನೀಡುವಂತೆ ಜಿಟಿ ದೇವೇಗೌಡರಿಗೆ ಮನವಿ ಮಾಡಿದ್ದೇನೆ. ಜಿ.ಟಿಡಿ ಅವರ ಕುಟುಂಬದಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ. ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
Key words: mysore-BJP candidate- H Vishwanath, meet- former minister -GT Deve Gowda—support