ಮೈಸೂರು,ಏಪ್ರಿಲ್,24,2024(www.justkannada.in): ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ, ಜಾಹೀರಾತು ತಂತ್ರ ಪ್ರತಿತಂತ್ರ, ಆರೋಪ ಪ್ರತ್ಯಾರೋಪ ಜೋರಾಗಿಯೇ ಇದೆ. ಈ ಮಧ್ಯೆ ಇಂದು ಮೈಸೂರಿನಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಗುಡುಗಿದರೇ ಇತ್ತ ಬಿಜೆಪಿ ಮುಖಂಡ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ, ಬಿಜೆಪಿ ಮುಖಂಡೆ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಮೈಸೂರಿನಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಕಾಂಗ್ರೆಸ್ ವಕ್ತಾರೆ, ಮಾಜಿ ಸಂಸದೆ ತೇಜಸ್ವಿನಿಗೌಡ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಮೊದಲಿಗೆ ನೇಹಾ ಹೀರೇಮಠ ಬರ್ಬರ ಹತ್ಯೆ ಪ್ರಕರಣಕ್ಕೆ ಸಂತಾಪ ಸೂಚಿಸಿದ ಡಾ. ಪುಷ್ಪ ಅಮರನಾಥ್, ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ನಿಜವಾಗಿಯೂ ಖಂಡನೀಯ, ಪ್ರಕರಣಕ್ಕೆ ಸೂಕ್ತ ನ್ಯಾಯ ಸಿಗಬೇಕು, ಕುಟುಂಬಕ್ಕೆ ನೋವನ್ನ ಸಹಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.
ಕಾಂಗ್ರೆಸ್ ಗೆ ಮತ ಹಾಕಿದ್ರೆ ಹೆಣ್ಣು ಮಕ್ಕಳು ನಿಮ್ಮ ತಾಳಿ ಕಳೆದುಕೊಳ್ಳುತ್ತೀರಾ ಎಂಬ ಪ್ರಧಾನಿ ಮೋದಿ ಹೇಳಿಕೆ ಖಂಡಿಸಿದ ಪುಷ್ಪ ಅಮರನಾಥ್, ಮಣಿಪುರದಲ್ಲಿ ನಡೆದ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಸಂದರ್ಭದಲ್ಲಿ ಮಹಿಳೆಯರ ಬಗ್ಗೆ ಕನಿಕರ ಬರಲಿಲ್ವಾ.? ಕೋವಿಡ್ ಸಮಯದಲ್ಲಿ ಸಾವಿರಾರು ಮಹಿಳೆಯರು ಪಟ್ಟ ಕಷ್ಟದ ದಿನಗಳಲ್ಲಿ ನಿಮಗೆ ಹೆಣ್ಣು ಮಕ್ಕಳು ಕಷ್ಟ ನೆನಪಾಗಲಿಲ್ವಾ.? ಯಾವುದೇ ಅಭಿವೃದ್ಧಿ ಮಾಡದೇ ಜನರ ಬಳಿ ಮತ ಕೇಳಲು ನಿಮಗೆ ಯಾವುದೇ ನೈತಿಕತೆ ಇಲ್ಲ, ಇವರನ್ನು ಧಿಕ್ಕರಿಸುವ ಕೆಲಸವನ್ನು ಮತದಾರರು ಮಾಡಬೇಕು. ನಾವು ನುಡಿದಂತೆ ನಡೆದಿದ್ದೇವೆ. ನಮ್ಮ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಪಂಚ ಗ್ಯಾರಂಟಿಗಳ ಜಾರಿ ಮಾಡಿ ನಾವು ನುಡಿದಂತೆ ನಡೆದಿದ್ದೇವೆ ಹಾಗಾಗಿ ನಾವು ಮತದಾರರ ಬಳಿ ಧೈರ್ಯವಾಗಿ ಹೋಗಿ ಮತ ಕೇಳುತ್ತೇವೆ. ಆದರೆ ಕೇಂದ್ರ ಸರ್ಕಾರದ ಯಾವು ಮುಖ ಇಟ್ಟು ಜನರ ಬಳಿ ಹೋಗಿ ಮತಕೇಳುತ್ತಿದೆ. ನಾವು ಕೆಲಸ ಮಾಡಿದ್ದೀವಿ ಈಗ ಕೂಲಿ ಕೇಳುತ್ತಿದ್ದೇವೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಿಕೊಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ- ಬಿಜೆಪಿ ಮುಖಂಡ ರಘು ಕೌಟಿಲ್ಯ
ಇತ್ತ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿರುವ ಬಿಜೆಪಿ ಮುಖಂಡ, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹೆಣ್ಣು ಮಕ್ಕಳ ಕೊಲೆ, ಅತ್ಯಾಚಾರಗಳು ಹೆಚ್ಚಾಗಿದೆ. ಒಂದು ಸಮುದಾಯದ ಓಲೈಕೆಗೆ ಸರ್ಕಾರ ಮುಂದಾಗಿದೆ. ನಮ್ಮ ಹೆಣ್ಣು ಮಕ್ಕಳಯನ್ನ ನಾವೇ ರಕ್ಷಣೆ ಮಾಡಿಕೊಳ್ಳಬೇಕಿದೆ. ಇಂತಹ ಸರ್ಕಾರಕ್ಕೆ ಜನರು 26 ತಾರೀಖು ತಕ್ಕ ಪಾಠ ಕಲಿಸುತ್ತಾರೆ. ಗ್ಯಾರಂಟಿ ಯೋಜನೆಗಳಿಗೆ ವಿವಿಧ ಸಮುದಾಯಕ್ಕೆ ನೀಡುತ್ತಿದ್ದ ಅನುದಾನ ಬಳಸಿಕೊಂಡಿದ್ದಾರೆ. ಸರ್ಕಾರದ ಖಜಾನೆ ಖಾಲಿಯಾಗಿದೆ. ಹಳೆ ಡಬ್ಬ, ಖಾಲಿ ಸೀಸ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ರಾಜ್ಯದಲ್ಲಿಯೂ ಅತಿ ಹೆಚ್ಚು ಸ್ಥಾನವನ್ನ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರ ಗೆಲ್ಲುತ್ತೆವೆ- ಮಾಳವಿಕ ಅವಿನಾಶ್
ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಮಾತನಾಡಿ, ಏಪ್ರಿಲ್ 26 ರಂದು ನಡೆಯಲಿರುವ ಚುನಾವಣೆಗೆ ನಾವು ಸಿದ್ದರಿದ್ದೇವೆ. ಜನರ ಮನಸ್ಸಿನಲ್ಲಿ ಮೋದಿಯವರು ಮನೆ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳ ಸಾಧನೆ ಮುಂದಿಟ್ಟುಕೊಂಡು ನಾವು ಚುನಾವಣೆ ಎದುರಿಸುತ್ತೇವೆ. ಕಳೆದ ಹತ್ತು ವರ್ಷದ ಹಿಂದೆ ದೇಶದ ಆರ್ಥಿಕತೆ ಉತ್ತಮವಾಗಿರಲಿಲ್ಲ. ಮೋದಿಯವರು ಪ್ರಧಾನಿಯಾದ ಬಳಿಕ ದೇಶದ ಆರ್ಥಿಕತೆ ತುಂಬಾ ಚನ್ನಾಗಿದೆ. ಮಹಿಳೆಯರನ್ನ ಶಸಕ್ತರನ್ನಾಗಿ ಮಾಡೋದು ಮೋದಿಯವರ ಗುರಿಯಾಗಿತ್ತು. ಈಗ ನಾವು ಮಹಿಳೆಯರ ಅಭಿವೃದ್ಧಿಯತ್ತ ಸಾಗಿದ್ದೇವೆ. 2047ಕ್ಕೆ ಭಾರತಕ್ಕೆ ಸ್ವತಂತ್ರ ಬಂದು ನೂರು ವರ್ಷ ತುಂಬಲಿದೆ. ಅಭಿವೃದ್ಧಿ ಭಾರತ ನಿರ್ಮಾಣ ಮಾಡಲು ಸಂಸತ್ ನಲ್ಲಿ 370 ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಸಂಕಲ್ಪ ಮಾಡಲಾಗಿದೆ. ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರ ಗೆಲ್ಲುತ್ತೆವೆ ಎಂದರು.
Key words: Mysore, BJP, Congress, election