ಮೈಸೂರು,ಮಾರ್ಚ್,23,2024(www.justkannada.in): ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿ ಬೆಳವಣಿಗೆ ಕಂಡು ಬಂದಿದ್ದು, ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಬಿಜೆಪಿ ಜೆಡಿಎಸ್ ನಾಯಕರು ಕಾಂಗ್ರೆಸ್ ನತ್ತ ಮುಖ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಹೌದು ಈ ಕುರಿತು ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ ಹರೀಶ್ ಗೌಡ ಪ್ರತಿಕ್ರಿಯಿಸಿದ್ದು, ಇದೇ ತಿಂಗಳು 27ರಂದು ಅನೇಕ ಬಿಜೆಪಿ, ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸೇರ್ಪಡೆಯಾಗಲಿದ್ದಾರೆ. ನಾವೆಲ್ಲರೂ ಅಂದು ಶಕ್ತಿ ಪ್ರದರ್ಶನ ಮಾಡುತ್ತೇವೆ. ಚುನಾವಣೆಗೆ ನಾವು ಸಿದ್ದರಿದ್ದೇವೆ ಎಂದು ತೋರಿಸುತ್ತೇವೆ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಶಾಸಕ ಕೆ. ಹರೀಶ್ ಗೌಡ, ಕಾಂಗ್ರೆಸ್ ಚುನಾವಣೆಗೆ ಸಜ್ಜಾಗಿದ್ದು, ಸಮರ್ಪಕವಾಗಿ ಗೆಲ್ಲುತ್ತೇವೆ. ಮೈಸೂರು ಕೊಡಗು ಕ್ಷೇತ್ರದಲ್ಲಿ ಐದು ಜನರು ಕಾಂಗ್ರೆಸ್ ಶಾಸಕರಿದ್ದೇವೆ. ಮೂರು ಕ್ಷೇತ್ರದಲ್ಲಿ ಎರಡು ಜೆಡಿಎಸ್,ಬಿಜೆಪಿ ಇದೆ. ಬೇರೆ ಪಕ್ಷದ ಅಭ್ಯರ್ಥಿ ಯಾರು ಎಂಬುದಕ್ಕಿಂತ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಬಿಜೆಪಿ ದುರಾಡಳಿತದ ಬಗ್ಗೆ ಜನರಿಗೆ ತಿಳಿಸುತ್ತೇವೆ. ಸಿಎಂ ಸಿದ್ದರಾಮಯ್ಯ ಮೈಸೂರಿಗೆ ನೀಡಿರುವ ಕೊಡುಗೆ ಬಗ್ಗೆ ತಿಳಿಸುತ್ತೇವೆ. 900 ಕೋಟಿಗೂ ಹೆಚ್ಚಿನ ಅನುದಾನ ಈಗ ಸಿಎಂ ನೀಡಿದ್ದಾರೆ. ಸಿಎಂ, ಡಿಸಿಎಂ ಅವರಿಗೆ ಮೈಸೂರಿನ ಬಗ್ಗೆ ಕಾಳಜಿ ಇದೆ. ಅದನ್ನ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು.
ಚುನಾವಣೆ ಗೆಲ್ಲಲು ನಮಗೆ ಯಾವುದೇ ಅಡೆತಡೆ ಇಲ್ಲ. ನಮ್ಮ ಅಭ್ಯರ್ಥಿ ಕ್ಲೀನ್ ಇಮೇಜ್ ಹೊಂದಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನು ಅಭ್ಯರ್ಥಿ ಮಾಡಿದೆ ಅವರನ್ನು ಗೆಲ್ಲಿಸುವ ಕೆಲಸ ಮಾಡೋಣ. ಬಿಜೆಪಿ ಅವರು ಮೋದಿ ಹೆಸರಿನಲ್ಲಿ ಮತ ಕೇಳಿದರೆ. ನಾವು ಸಿದ್ದರಾಮಯ್ಯ, ಖರ್ಗೆ, ಡಿಕೆಶಿ ಹೆಸರಿನಲ್ಲಿ ಮತ ಕೇಳುತ್ತೇವೆ. ಕಾಂಗ್ರೆಸ್ ಪಕ್ಷದ ಇತಿಹಾಸ ದೊಡ್ಡದಿದೆ. ಕಾಂಗ್ರೆಸ್ ಪಕ್ಷದಲ್ಲಿ ಒಕ್ಕಲಿಗರಿಗೆ ಮನ್ನಣೆ ಇಲ್ಲ ಎಂಬ ಆರೋಪ ಮಾಡಲಾಗಿತ್ತು. ಈಗ ಬಿಜೆಪಿಯಲ್ಲೇ ಒಕ್ಕಲಿಗ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ. ಒಕ್ಕಲಿಗ ಸಮುದಾಯವನ್ನು ಒಡೆಯುವ ಕೆಲಸ ಮಾಡುವವರಿಗೆ ನಾವು ಇದನ್ನು ಮನವರಿಕೆ ಮಾಡಿ, ಸಮುದಾಯದ ಒಗ್ಗೂಡಿಸಬೇಕಿದೆ. ಒಕ್ಕಲಿಗ ಜನಾಂಗಕ್ಕೆ ಕಾಂಗ್ರೆಸ್ ಪ್ರಾತಿನಿಧ್ಯ ನೀಡುತ್ತಾ ಬಂದಿದೆ. ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿ, ವೆಂಕಟೇಶ್ ಸೇರಿದಂತೆ ಅನೇಕ ಒಕ್ಕಲಿಗ ನಾಯಕರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಮೇಲ್ವರ್ಗಕ್ಕೆ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ ಎಂಬುದು ಸುಳ್ಳು. ಕಾಂಗ್ರೆಸ್ ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡುತ್ತದೆ. ಬಿಜೆಪಿ ಅವರು ಈ ವಿಷಯದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇದು ದೇಶದ ಭವಿಷ್ಯಕ್ಕಾಗಿ ನಡೆಯುವ ಚುನಾವಣೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಮಾನ್ಯ ಕಾರ್ಯಕರ್ತರಿಗೆ ಕಾಂಗ್ರೆಸ್ ಟಿಕೆಟ್- ಶಾಸಕ ತನ್ವೀರ್ ಸೇಠ್
ಸಂವಾದದಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್, ಸಾಮಾನ್ಯ ಕಾರ್ಯಕರ್ತರಿಗೆ ಕಾಂಗ್ರೆಸ್ ನಲ್ಲಿ ಟಿಕೆಟ್ ನೀಡಲಾಗಿದೆ. ಬಿಜೆಪಿ ಅಭ್ಯರ್ಥಿ ಬಗ್ಗೆ ಮಾತನಾಡಲ್ಲ. ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಸಿಕ್ಕಿಲ್ಲ. ಅದರ ಬಗ್ಗೆಯೂ ನಾವು ಮಾತನಾಡಲ್ಲ. ಜನರ ಸಮಸ್ಯೆಗೆ ಸ್ಪಂದಿಸಲು ನಮ್ಮ ಅಭ್ಯರ್ಥಿ ಲಭ್ಯವಾಗುತ್ತಾರೆ. ಬಡತನ, ಹಸಿವು ಮುಕ್ತಗೊಳಿಸಲು ರಾಜ್ಯ ಸರ್ಕಾರ ಕೊಟ್ಟಿರುವ ಯೋಜನೆಗಳು ಸಹಕಾರಿ ಆಗಲಿವೆ. ಪಂಚ ಗ್ಯಾರಂಟಿ ಯೋಜನೆಗಳು ನಮಗೆ ಶ್ರೀರಕ್ಷೆ. ತಂಬಾಕು ಬೆಳೆಗಾರರ ಸಮಸ್ಯೆ, ಮೈಸೂರಿಗೆ ಅಂತಾರಾಷ್ಟ್ರೀಯ ಮನ್ನಣೆ, ಉದ್ಯೋಗ ಸೃಷ್ಟಿ ನಮ್ಮ ಆದ್ಯತೆಯಾಗಿದೆ. ದ್ವೇಷ, ವಿಷ ಬೀಜ ಬಿತ್ತುವುದು ನಮ್ಮ ಕೆಲಸ ಅಲ್ಲ. ನಾವು ಮೌಲ್ಯಾಧಾರಿತ ರಾಜಕಾರಣ ಮಾಡುತ್ತೇವೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
Key words: mysore- BJP- JDS -leaders – join Congress -March 27 – MLA -K. Harish Gowda.