ಮೈಸೂರು, ಜೂ.16, 2022 : (www.justkannada.in news) : ಇದೇ ಜೂ. 21 ರಂದು ವಿಶ್ವ ವಿಖ್ಯಾತ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿರುವ ‘ ವಿಶ್ವಯೋಗ ದಿನ’ ದ ಸಮಾರಂಭಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಬಿಜೆಪಿ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ‘ ಗೆಲುವಿನ ಉಡುಗೊರೆ’ ನೀಡಬೇಕು ಎಂಬ ರಾಜ್ಯ ಬಿಜೆಪಿ ನಾಯಕರ ಲೆಕ್ಕಚಾರ ತಲೆಕೆಳಗಾಗಿದೆ.
ಮುಖ್ಯಮಂತ್ರಿ ಹಾಗೂ ಸಚಿವ, ಸಂಸದರಾದಿಯಾಗಿ ಎಲ್ಲ ನಾಯಕರು ಚುನಾವಣೆ ಪ್ರಚಾರದ ವೇಳೆ ಈ ಅಂಶವನ್ನೇ ಒತ್ತಿಒತ್ತಿ ಹೇಳುವ ಮೂಲಕ ಪದವೀಧರ ಮತದಾರರ ಒಲೈಕೆಗೆ ಮುಂದಾಗಿದ್ದರು. ಪ್ರಧಾನಿ ಮೋದಿ ಬಗ್ಗೆ ಯುವಕರಲ್ಲಿ ಹೆಚ್ಚಿನ ಕ್ರೇಜ್ ಇರುವುದನ್ನು ಮನಗಂಡೇ ರಾಜ್ಯ ನಾಯಕರು ಈ ಗೆಲುವಿನ ಉಡುಗೊರೆಯ ತಂತ್ರ ಹೆಣೆದಿದ್ದರು.
ಬಿಜೆಪಿ ಅಭ್ಯರ್ಥಿ ಮೈ.ವಿ.ಶಂಕರ್ ಕಳೆದ ಸಲ ಕಡಿಮೆ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಎದುರು ಸೋಲು ಕಂಡಿದ್ದರು. ಈ ಬಾರಿ ಶತಯಾಗತಾಯ ಗೆಲ್ಲಲ್ಲೇ ಬೇಕು ಎಂಬ ಪಣದೊಂದಿಗೆ ಕಣಕ್ಕೆ ಇಳಿದಿದ್ದರು. ಬಿಜೆಪಿ ಮುಖಂಡ ಸಂತೋಷ್ ಕೃಪಕಟಾಕ್ಷವೂ ರವಿಶಂಕರ್ ಮೇಲಿತ್ತು.
ಈ ಸಲುವಾಗಿಯೇ ಕೇಂದ್ರ ಹಾಗೂ ರಾಜ್ಯದ ನಾಯಕರು ಮೈಸೂರಿಗೆ ದಾಂಗುಡಿ ಇಟ್ಟು ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಕೇಂದ್ರ ಸಚಿವರು, ರಾಷ್ಟ್ರಮಟ್ಟದ ಮುಖಂಡರು, ರಾಜ್ಯದ ಸಚಿವರು, ಜಿಲ್ಲಾ ಉಸ್ತುವಾರಿಗಳು, ಸಂಸದರು, ಶಾಸಕರು…ಹೀಗೆ ದಂಡುದಾಳಿ ಸಮೇತ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲಾಗಿತ್ತು. ಆ ಮೂಲಕ ಅಭ್ಯರ್ಥಿ ಗೆಲುವಿಗೆ ಟೊಂಕಕಟ್ಟಿರುವ ರಾಜ್ಯದ ವರಿಷ್ಠರನ್ನು ‘ ಸಂತೋಷ’ ಪಡಿಸುವುದು ಹಾಗೂ ಪ್ರಧಾನಿ ಮೋದಿ ಅವರಿಗೆ ಸಮರ್ಪಿಸಲು ಉದ್ದೇಶಿಸಿದ್ದ ‘ ಗೆಲುವಿನ ಉಡುಗೊರೆ ‘ ಗೆ ತಮ್ಮದು ಕಾಣಿಕೆ ಇದೆ ಎಂಬುದನ್ನು ರುಜುವಾತು ಪಡಿಸುವ ಗುರಿ ಹೊಂದಿದ್ದರು. ಆದರೆ ಇದೀಗ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಗೆಲುವಿನ ದಾಖಲೆ ನಿರ್ಮಿಸುವ ಮೂಲಕ ಬಿಜೆಪಿ ನಾಯಕರ ಲೆಕ್ಕಚಾರ ತಲೆಕೆಳಗಾಗಿದೆ.
ಯೋಗದಿನದ ಕ್ರೆಡಿಟ್ ಗಾಗಿ ಹರ ಸಾಹಸ ಪಟ್ಟಿದ್ದವರು ಇದೀಗ, ಜೂ. 21 ರಂದು ಪ್ರಧಾನಿ ಮೋದಿ ಅವರನ್ನು ಮೈಸೂರಲ್ಲಿ ಹೇಗೆ ಎದುರುಗೊಳ್ಳುತ್ತಾರೆ ಎಂಬುದೇ ಪ್ರಶ್ನೆ.
key words : Mysore-bjp-pm-narendra modi-election-yoga