ಮೈಸೂರು,ಆ,11.2020(www.justkannada.in): ಅಂಗವೈಕಲ್ಯ ಶಾಪ ಅಂತಾರೆ, ಮೆಟ್ಟಿ ನಿಂತವರು ಸಾಧಕರಾಗ್ತಾರೆ. ಹುಟ್ಟಿನಿಂದಲೇ ದೃಷ್ಟಿ ಹೀನಳಾದ ಬಾಲೆಯೊಬ್ಬಳು ಜಗಬೆಳಗೋ ಸೂರ್ಯನ ರಶ್ಮಿಗಳಂತೆ ಪ್ರಜ್ವಲಿಸುತ್ತಿದ್ದಾಳೆ. ಅಷ್ಟಕ್ಕೂ ಆ ಆಶಾಕಿರಣ ಯಾವುದು? ಇರುಳ ಹಿಂದೆ ಬೆಳಕುಂಟು ಎಂದು ತೋರಿಸಿದಾಕೆಯ ಸಾಧನೆ ಎಂತಹದ್ದು ? ಇಲ್ಲಿದೆ ನೋಡಿ ಸ್ಟೋರಿ…
ಮೈಸೂರಿನ ಗ್ರಾಮೀಣ ಪ್ರತಿಭೆಯಾದ ಈಕೆ ಹೆಸರು ನಂದಿನಿ. ಸಾಧಿಸುವ ಹಠ, ಛಲ, ಮನಸ್ಸು, ಅಘಾದ ವಿಶ್ವಾಸ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದ್ದಾಳೆ. ಅಂಧತ್ವದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಇಡೀ ಶಾಲೆಗೆ ಪ್ರಥಮ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದ್ದಾಳೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಅರಸು ಕಲ್ಲಹಳ್ಳಿಯ ಪ್ರಕಾಶ್ ಮತ್ತು ಭಾಗ್ಯ ದಂಪತಿಯ ಪುತ್ರಿ ಈ ನಂದಿನಿ. ಹುಟ್ಟುವಾಗಲೇ ದೃಷ್ಟಿ ಕಳೆದುಕೊಂಡಿದ್ದಾಳೆ. ಆದರೂ ಛಲ ಬಿಡದೆ ಆತ್ಮ ವಿಶ್ವಾಸದಿಂದ ಮುನ್ನುಗ್ಗುವ ಈಕೆ ಒಂದರಿಂದ ಮೂರನೇ ತರಗತಿ ವರೆಗೆ ಹುಟ್ಟೂರಿನಲ್ಲೇ ವ್ಯಾಸಂಗ ಪಡೆದಿದ್ದಾಳೆ. ಈಕೆ ದೃಷ್ಟಿ ಹೀನತೆಯಿಂದ ಬಳಲುತ್ತಿರುವುದನ್ನ ಕಂಡ ಮೈಸೂರಿನ ಮೇಟಗಳ್ಳಿಯಲ್ಲಿರುವ ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಯ ಸಿಬ್ಬಂದಿ ಈಕೆಯನ್ನ ಶಾಲೆಗೆ ಕರೆದುಕೊಂಡು ಬಂದು ಬ್ರೇಲ್ ಎಜುಕೇಷನ್ ಕೊಡಿಸಿದ್ದಾರೆ. ವಾಕ್ ಮತ್ತು ಶ್ರವಣ ಮಾದ್ಯಮದಲ್ಲಿ ವ್ಯಾಸಂಗ ಪಡೆದ ನಂದಿನಿ ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 92.16 ರಷ್ಟು ಅಂಕಗಳೊಂದಿಗೆ ಪ್ರಥಮ ದರ್ಜೆ ಫಲಿತಾಂಶ ಪಡೆಯುವ ಮೂಲಕ ಇಡೀ ರಂಗರಾವ್ ಶಾಲೆಗೆ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ. ಅಷ್ಟು ಮಾತ್ರವಲ್ಲ ಕಳೆದ ಏಳು ವರ್ಷಗಳ ಬಳಿಕ ಶಾಲೆಯಲ್ಲಿ ಅತ್ಯುನ್ನತ ಫಲಿತಾಂಶ ಪಡೆಯುವ ಮೂಲಕ ಇಡೀ ಶಾಲೆಗೆ ಮಾದರಿ ವಿದ್ಯಾರ್ಥಿನಿಯಾಗಿದ್ದಾಳೆ.
ಪ್ರಾಥಮಿಕ ಶಿಕ್ಷಣದಲ್ಲಿಯೇ ಸಾಧನೆ ಮಾಡುವ ಮೂಲಕ ಇತರರಿಗೆ ಹುಬ್ಬೇರುವಂತೆ ಮಾಡಿರುವ ಈಕೆಗೆ ತಂದೆ ತಾಯಿಯೇ ಪ್ರೇರಣೆಯಾಗಿದ್ದಾರೆ. ಅಂಧ ಮಗಳು ಎಂದು ಕಡೆಗಣಿಸದೆ, ಕರುಣೆ ತೋರದೆ , ಶಿಕ್ಷಣದಿಂದಲೂ ವಂಚಿಸದೆ, ಅಧಮ್ಯ ವಿಶ್ವಾಸ ತುಂಬಿದ್ದರ ಫಲವಾಗಿ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ. ಮೊದಲಿಂದಲೂ ಈಕೆ ವಿದ್ಯಾಭ್ಯಾಸದಲ್ಲಿ ಅಪಾರ ಆಸಕ್ತಿ ಹೊಂದಿದ್ದು ದೃಷ್ಟಿಹೀನಳಾದರೂ ಸಾಧನೆಯಲ್ಲಿ ಮಾತ್ರ ಮೇಲುಗೈ ಸಾಧಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.
ಇನ್ನು ನಂದಿನಿ ತಂದೆ ತಾಯಿ ಕೃಷಿ ಕುಟುಂಬದ ಹಿನ್ನೆಲೆಯವರಾಗಿದ್ದು , ಮಗಳ ವಿದ್ಯಾಭ್ಯಾಸಕ್ಕೆ ಅಂಧತ್ವ ಅಡ್ಡಿಯಾಗಿಲ್ಲ , ಸದಾ ಲವ ಲವಿಕೆಯಿಂದಿರುವ ಮಗಳ ಸಾಧನೆಗೆ ರಂಗರಾವ್ ಅಂಗವಿಕಲರ ಶಾಲೆಯ ಶಿಕ್ಷಕರ ಪ್ರೋತ್ಸಾಹವೇ ನನ್ನ ಮಗಳ ಸಾಧನೆಗೆ ಕಾರಣ ಎಂದು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದೇನೆ ಆಗಲಿ, ಸಾಧಿಸುವ ಹಠವೊಂದಿದ್ದರೆ ಏನನ್ನಾದರೂ ಮೆಟ್ಟಿನಿಂತು ಸಾಧನೆ ಶಿಖರ ಏರಬಹುದು ಎಂಬುದಕ್ಕೆ ನಂದಿನಿ ಮಾದರಿಯಾಗಿದ್ದಾಳೆ. ಈಕೆಯ ಈ ಸ್ಪೂರ್ತಿ ಇತರರಿಗೆ ಮಾದರಿ ಆಗಲಿ ಅನ್ನೋದು ನಮ್ಮ ಆಶಯ.
Key words: mysore- Blindness- SSLC- student- achievement