ಮೈಸೂರು, ಜೂ.26, 2019 : (www.justkannada.in news) ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಈ ರೀತಿ ಅಡ್ಡಿಪಡಿಸಬಾರದು. ಬಿಜೆಪಿಯವರ ಈ ನಡೆ ಸರಿಯಿಲ್ಲ ಎಂದು ಹುಣಸೂರು ಶಾಸಕ ಹೆಚ್.ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಬುಧವಾರ ಆಯೋಜಿಸಿದ್ದ ಪತ್ರಕರ್ತ ರವಿ ಪಾಂಡವಪುರ ಅವರ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದರು.
ಸಿಎಂ ಒಂದು ಹಳ್ಳಿಗೆ ಬರುತ್ತಿದ್ದಾರೆ ಎಂದ್ರೆ ಅಲ್ಲಿರುವ ಎಲ್ಲರೂ ಅವರನ್ನು ಸ್ವಾಗತ ಮಾಡಬೇಕು. ಬದಲಿಗೆ ಸುಮ್ಮನೆ ಗೊಂದಲ ಸೃಷ್ಟಿಸಬಾರದು. ಪ್ರತಿ ಕೆಲಸದಲ್ಲೂ ರಾಜಕೀಯ ಮಾಡುವುದರಿಂದ ಯಾವುದೇ ಪ್ರಯೋಜನವಾಗದು ಎಂದು ಕಿವಿಮಾತು ಹೇಳಿದರು.
ಮೋದಿಗೆ ಓಟು ಹಾಕಿ ಸಮಸ್ಯೆನ ನಮ್ಮ ಬಳಿ ಹೇಳ್ತಿರಾ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಶ್ವನಾಥ್, ಸಿಎಂ ಬೇಸರಗೊಂಡು ಆ ರೀತಿ ಹೇಳಿಕೆ ಕೊಟ್ಟಿದ್ದಾರೆ ಅಷ್ಟೆ. ಅದರಲ್ಲಿ ಬೇರೆನು ಅರ್ಥವಿಲ್ಲ. ಎಲ್ಲ ಕಡೆ ‘ ಮೋದಿ ಮೋದಿ…’ ಎಂದರೆ ಎಂಥವರಿಗಾದರೂ ಬೇಜಾರಾಗುತ್ತೆ. ಅದೇ ರೀತಿ ಸಿಎಂಗೂ ಸಹ ಬೇಸರವಾಗಿದೆ. ಅದಕ್ಕೆ ಆ ಸಂಧರ್ಭದಲ್ಲಿ ಆ ರೀತಿ ಹೇಳಿರಬಹುದು. ಅದನ್ನ ಬಿಟ್ಟರೆ ನಮ್ಮ ಸಿಎಂ ಎಲ್ಲರನ್ನು ಪ್ರೀತಿಯಿಂದ ನೋಡ್ತಾರೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಅವರ ವರ್ತನೆಯನ್ನು ಸಮರ್ಥಿಸಿಕೊಂಡರು.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮಧುಬಂಗಾರಪ್ಪರನ್ನ ನೇಮಕ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ನನ್ನ ಸಲಹೆ ನೀಡಿದ್ದೇನೆ. ಮಧು ಬಂಗಾರಪ್ಪರನ್ನ ಜೆಡಿಎಸ್ ರಾಜ್ಯಾಧ್ಯಕ್ಷರನ್ನ ನೇಮಕ ಮಾಡಿ ಅಂತ ಹೇಳಿದ್ದೇನೆ. ಅದು ನನ್ನ ಸಲಹೆ ಅಷ್ಟೇ. ಆದರೆ ಈ ಸಂಬಂಧ ದೊಡ್ಡವರ ಆಯ್ಕೆಯೇ ಅಂತಿಮ. ಅದಕ್ಕೆ ನನ್ನ ಸಮ್ಮತಿ ಇದೆ ಎಂದರು.
key words : mysore-book-h.vishwanath-cm-kumaraswamy