ಮೈಸೂರು, ಜೂ.27, 2019 (www.justkannada.in news) : ಪ್ರಯೋಗಶೀಲ ಕೃಷಿ ವಿಧಾನಗಳಿಂದ ನೆಮ್ಮದಿ ಕಂಡುಕೊಂಡಿರುವ ಅನ್ನದಾತರ ಒಂದಿಷ್ಟು ವಿನೂತನ ಮಾದರಿಗಳನ್ನು ರೈತರಿಗೆ ಪರಿಚಯಿಸಿಕೊಡುವ ಹವ್ಯಾಸಿ ಪತ್ರಕರ್ತ, ಕೃಷಿಕ ಚಿನ್ನಸ್ವಾಮಿ ವಡ್ಡಗೆರೆ ಬರೆದಿರುವ `ಬಂಗಾರದ ಮನುಷ್ಯರು’ ಬೆಳಕಿನ ಬೇಸಾಯದ ಕಥಾನಕ ಹಾಗೂ ದೇಸಿಕೃಷಿ ಪರಂಪರೆ ಪರಿಚಯಿಸುವ `ಕೃಷಿ ಸಂಸ್ಕೃತಿ ಕಥನ’ ಎಂಬ ಎರಡು ಕೃತಿಗಳ ಬಿಡುಗಡೆ ಜೂನ್ 30 ರಂದು ಭಾನುವಾರ ನಡೆಯಲಿದೆ.
ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಅಂದು ಬೆಳಗ್ಗೆ 10.30 ಕ್ಕೆ ಪುರುಷೋತ್ತಮ್ ಮತ್ತು ತಂಡದಿಂದ ಗೀತಗಾಯನ ನಂತರ 11.30 ಕ್ಕೆ ಕೃಷಿ ಸಾಧಕರಿಂದ ಕೃತಿಗಳ ಬಿಡುಗಡೆ, ಪ್ರಸಕ್ತ ಕೃಷಿ ಬಿಕ್ಕಟ್ಟುಗಳನ್ನು ಕುರಿತ ಉಪನ್ಯಾಸ ನಡೆಯಲಿದೆ.
ಬೆಳಕಿನ ಬೇಸಾಯ ಕುರಿತು ವಿಜ್ಞಾನ ಲೇಖಕ ನಾಗೇಶ್ ಹೆಗಡೆ, `ಕೃಷಿ ಸಂಸ್ಕೃತಿ ಕಥನ’ ಕುರಿತು ಜಲತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ ಮಾತನಾಡಲಿದ್ದಾರೆ. ಆಂದೋಲನ ಪತ್ರಿಕೆಯ ಸಹ ಸಂಪಾದಕಿ ರಶ್ಮಿ ಕೌಜಲಗಿ, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಚಾಮರಾಜನಗರ ಜಿಲ್ಲಾ ರೈತಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್, ಅಭಿರುಚಿ ಗಣೇಶ್, ನಿಂಗರಾಜು ಚಿತ್ತಣ್ಣನವರ್ ಹಾಗೂ ಸಾಧಕ ಅನ್ನದಾತರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಭಿರುಚಿ, ಚಿಂತನ ಚಿತ್ತಾರ ಪ್ರಕಾಶನ ಮತ್ತು ಪರಿವರ್ತನ ರಂಗಸಮಾಜದ ಗೆಳೆಯರ ಸಹಕಾರದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ನೈಸರ್ಗಿಕ ಕೃಷಿ ಸಾಧಕರೆ ಚಾಲನೆ ನೀಡಲಿರುವುದು ವಿಶೇಷ.
ಪುಸ್ತಕದ ವಿಶೇಷತೆ :
ಯಶಸ್ವಿ ರೈತರ ಕೃಷಿ ಅನುಭವದ ಜೊತೆಗೆ ಅವರ ಜೀವನ ಪಯಣದ ಕಿರುಮಾಹಿತಿಯನ್ನು ಒಳಗೊಂಡಿರುವ ಬರೆಹಗಳು ರೈತರ ಆತ್ಮಕತೆಯಂತಿವೆ. ಇದು ಕೃತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಮಣ್ಣು, ನೀರು, ಬೆಳೆ, ಮಾರುಕಟ್ಟೆಯ ಬಗ್ಗೆ ಅರಿಯದೆ. ಯಾವುದೆ ಪೂರ್ವ ಸಿದ್ಧತೆ ಇಲ್ಲದೆ ಕೃಷಿಯಲ್ಲಿ ತೊಡಗಿಸಿಕೊಂಡರೆ ನಷ್ಟ ಅನುಭವಿಸಬೇಕಾಗುತ್ತದೆ. ಬೇಸಾಯದ ಗುಣಧರ್ಮಗಳನ್ನು ತಿಳಿದುಕೊಳ್ಳಲು ಕನ್ನಡದಲ್ಲಿ ಬಂದ ಕೃತಿಗಳು ವಿರಳ. ಬಂಗಾರದ ಮನುಷ್ಯರು ಮತ್ತು ಕೃಷಿ ಸಂಸ್ಕೃತಿ ಕಥಾನಕ ಪುಸ್ತಕಗಳು ಈ ನಿಟ್ಟಿನಲ್ಲಿ ರೈತರಿಗೆ ಸೂಕ್ತ ಮಾರ್ಗದರ್ಶನ,ಸ್ಫೂರ್ತಿ ನೀಡುವಂತಿವೆ.
ಈ ತಲೆಮಾರಿನ ಬಹುತೇಕ ಕೃಷಿಕರಿಗೆ ಸಾಂಪ್ರದಾಯಿಕ ಕೃಷಿ ಗೊತ್ತಿಲ್ಲ.ಆಧುನಿಕ ಶಿಕ್ಷಣದ ಬೆನ್ನುಹತ್ತಿ ಕೃಷಿ ಪರಂಪರೆಯನ್ನು ಮರೆತು ಹಸಿರು ಕ್ರಾಂತಿಯ ಸುಳಿಗೆ ಸಿಲುಕಿ ನಲುಗಿ ಹೋಗಿದ್ದಾರೆ.ಹಾಗಾಗಿ ದೇಸಿಕೃಷಿ ಪರಂಪರೆಯನ್ನು ನೆನಪಿಸಲು ಸಾವಯವ, ನೈಸರ್ಗಿಕ, ಸಹಜ ಕೃಷಿಯ ಕಡೆಗೆ ಯುವಜನಾಂಗದ ಗಮನಸೆಳೆಯುವಂತಹ ಒಂದಷ್ಟು ಪುಸ್ತಕಗಳನ್ನು ಪರಿಚಯಿಸುವ ಪ್ರಯತ್ನ ಈ ಪುಸ್ತಕದ ಮತ್ತೊಂದು ವಿಶೇಷತೆ
ಹೆಚ್ಚಿನ ಮಾಹಿತಿಗೆ ಚಿನ್ನಸ್ವಾಮಿ ವಡ್ಡಗೆರೆ ದೂ: 9380477210,9480587718
——
key words : mysore-book-journalist-aggriculture-book