ಮೈಸೂರು, ಜೂ.26, 2019 : (www.justkannada.in news) : ಸಾರಿಗೆ ಇಲಾಖೆಯನ್ನು ಸಚಿವರಾಗಲಿ, ಆಯುಕ್ತರಾಗಲಿ ನಿಯಂತ್ರಿಸುತ್ತಿಲ್ಲ. ಬದಲಿಗೆ ಒಂದು ಅಕ್ರಮ ‘ಸಿಂಡಿಕೇಟ್ ‘ ಇದನ್ನು ನಿಯಂತ್ರಿಸುತ್ತಿದೆ ಎಂದು ಜೆಡಿಎಸ್ ಮುಖಂಡ ಅಡಗೂರು ಎಚ್.ವಿಶ್ವನಾಥ್ ಆರೋಪಿಸಿದರು.
ಮೈಸೂರಿನಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಪತ್ರಕರ್ತ ರವಿ ಪಾಂಡವಪುರ ರಚನೆಯ ‘ ರೈಟ್ ರೈಟ್…’ ಮತ್ತು ‘ ಅಯ್ಯೋ ದ್ಯಾವ್ರೇ….’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಎಚ್.ವಿಶ್ವನಾಥ್ ಹೇಳಿದಿಷ್ಟು….
ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ನಾಲೆಗೆ ಬಿದ್ದ ಬಸ್ ದುರಂತ ಕುರಿತ ‘ ರೈಟ್ ರೈಟ್..’ ಪುಸ್ತಕದ ಬಗ್ಗೆ ಮಾತನಾಡುತ್ತಾ ಸುಸ್ಥಿತಿಯಲ್ಲಿರದ ಸಾವಿರಾರು ಬಸ್ ಗಳು ಸಂಚರಿಸುತ್ತಿವೆ. ಇದಕ್ಕೆ ಯಾರು ಹೊಣೆ..? ಎಂದು ಪ್ರಶ್ನಿಸಿದರು. ಮರುಗಳಿಗೆಯೇ, ಸಾರಿಗೆ ಇಲಾಖೆಯ ಸಚಿವರಾಗಲಿ ಅಥವಾ ಆಯುಕ್ತರಾಗಲಿ ಇಲಾಖೆ ಮೇಲೆ ನಿಯಂತ್ರಣ ಹೊಂದಿಲ್ಲ. ಇದನ್ನು ನಿರ್ವಹಿಸುತ್ತಿರುವವರು ಅಕ್ರಮ ದಂಧೆಯಲ್ಲಿರುವ ಸಿಂಡಿಕೇಟ್ ಎಂದು ಆರೋಪಿಸಿದರು. ಇದು ತುಂಬ ಹಿಂದಿನಿಂದಲೂ ಇದೆ. ಈಗಲೂ ಮುಂದುವರಿದಿದೆ. ಇದಕ್ಕೆ ಕಡಿವಾಣ ಹಾಕುವ ಶಕ್ತಿ ಇನ್ನು ಯಾರಿಗೂ ಬಂದಿಲ್ಲ ಎಂದರು.
ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ವಿಷ ಪ್ರಸಾದ ದುರಂತ ಕುರಿತು ಮಾತನಾಡಿ, ಮನುಷ್ಯನಿಗೆ ದೈವದ ಮೇಲಿರುವ ಭಕ್ತಿಯನ್ನೇ ಅಲ್ಲಾಡಿಸಿದ ಘಟನೆ ಇದು. ಯಾರೋ ಒಬ್ಬ ಖಾವಿಧಾರಿ ಮಾಡಿದ ಕುತಂತ್ರ ಈಗ ಪ್ರಸಾದವನ್ನು ಅನುಮಾನದಿಂದ ನೋಡುವಂತೆ ಮಾಡಿದೆ ಎಂದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಡಾ. ಭಾಷ್ಯಾಂ ಸ್ವಾಮೀಜಿ, ಪತ್ರಕರ್ತ ರವಿಪಾಂಡವಪುರ ಅವರ ತಾಯಿ ಅಲಮೇಲಮ್ಮ ಹಾಗೂ ಪತ್ನಿ ಶಿಲ್ಪಾ ಅವರಿಗೆ ಕೃತಿ ನೀಡುವ ಮೂಲಕ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸಿ.ಪಿ.ಕೆ, ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ ಪತ್ರಕರ್ತ ರವಿ ಪಾಂಡವಪುರ ಅವರ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಈ ಕೃತಿಯಲ್ಲಿ ರಾಜ್ಯ ಕಂಡ ಎರಡು ದುರಂತ ಘಟನೆಗಳನ್ನು ದಾಖಲಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
ಸಮಾರಂಭದಲ್ಲಿ ಸಂವಹನ ಪ್ರಕಾಶನದ ಲೋಕಪ್ಪ ಹಾಗೂ ಪುಸ್ತಕ ರಚನೆಕಾರ ಪತ್ರಕರ್ತ ರವಿಪಾಂಡವಪುರ ಭಾಗವಹಿಸಿದ್ದರು. ಬಿ.ಟಿ.ವಿ. ನ್ಯೂಸ್ ಚಾನಲ್ ನ ಮೈಸೂರು ಮುಖ್ಯಸ್ಥ ಬಿ.ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಡಾ.ಗೋವಿಂದರಾಜ್ ಅತಿಥಿಗಳನ್ನು ಸ್ವಾಗತಿಸಿದರು.
—
key words : mysore-book-release-ravi.pandavapura-vishwanath