ಜೈಲಿಗೆ ಹೋಗಿ ಬಂದವರಿಗೆ ಹಾರ ತುರಾಯಿ: ಸಂತೋಷ್ ಹೆಗ್ಡೆ ಬೇಸರ

 

ಮೈಸೂರು, ಅ.02, 2021 : (www.justkannada.in news ) ಇತ್ತೀಚಿನ ದಿನಗಳಲ್ಲಿ ಭ್ರಷ್ಟರನ್ನು ದೂರುವುದು ಕಡಿಮೆ ಆಗುತ್ತಿದೆ. ಜೈಲಿಗೆ ಹೋಗಿ ಬಂದವರಿಗೆ ಹಾರ ತುರಾಯಿ ಹಾಕಿ ಗೌರವಿಸಲಾಗುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.

ನಗರದ ರೋಟರಿ ಸಭಾಂಗಣದಲ್ಲಿ ವೈದ್ಯವಾರ್ತಾ ಪ್ರಕಾಶನ ಸಂಸ್ಥೆಯು ಆಯೋಜಿಸಿದ್ದ ಬಿ.ಆರ್. ನಟರಾಜ್ ಜೋಯಿಸ್ ಸಂಪಾದಿಸಿರುವ ವಿಶ್ರಾಂತ ನ್ಯಾಯಮೂರ್ತಿ ಡಾ. ಜಿನದತ್ತ ದೇಸಾಯಿ ಅವರ ಆಯ್ದ 90 ಚುಟುಕು ಕವಿತೆಗಳ ಸಂಕಲನ ‘ಗಾಂಧಿ ನಗರದಲ್ಲಿ ಕೋಳಿ ಸಾಂಬಾರ್’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದ್ದು ಹೀಗೆ..

ಗಾಂಧಿ ನಗರದಲ್ಲಿ ಕೋಳಿ ಸಾಂಬಾರ್ ಹೆಸರಿನ ಈ ಕೃತಿ ಹೊರತಂದಿರುವುದಕ್ಕೆ ಕೆಲವರು ಬೆದರಿಕೆ ಹಾಕಿದ್ದಾರಂತೆ. ಹಾಗೆ ಬೆದರಿಕೆ ಹಾಕುವವರಿಗೆ ಗಾಂಧಿನಗರದಲ್ಲಿನ ಅವ್ಯವಹಾರವನ್ನು ತಡೆಯುವ ಶಕ್ತಿ ಇಲ್ಲ. ಆದರೆ ಅದನ್ನು ವಿಡಂಬನಾತ್ಮಕವಾಗಿ ಜನರಿಗೆ ತಿಳಿಸಿ ಜಾಗೃತಿ ಮೂಡಿಸುವ ಕೆಲಸಕ್ಕಷ್ಟೇ ಅಡ್ಡಿಪಡಿಸುತ್ತಿದ್ದಾರೆ. ಬೆದರಿಕೆ ಹಾಕುವವರು ನನ್ನನ್ನು ಪಾರ್ಟಿ ಮಾಡಿ ನ್ಯಾಯಾಲಯದ ಮೊರೆ ಹೋಗಲಿ, ನಾನು ಉತ್ತರಿಸುತ್ತೇನೆ. ಏಕೆಂದರೆ ಜೈಲಿಗೆ ಹೋಗಿ ಬಂದ ಭ್ರಷ್ಟರನ್ನು ಹಾರ ಹಾಕಿ ಸ್ವಾಗತಿಸುವ ಸಂದರ್ಭದಲ್ಲಿದ್ದೇವೆ ಎಂದು ಅವರು ಹೇಳಿದರು.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಗಾಂಧಿ ಎಂಬುದು ಕೇವಲ ಒಂದು ಹೆಸರಲ್ಲ. ಅದೊಂದು ಶಕ್ತಿ, ಮಂತ್ರ, ನಿತ್ಯ ನಿರಂತರ ಚಳುವಳಿ ಆಗಿದೆ. ಗಾಂಧೀಜಿಯವರು ಭಾರತದಲ್ಲಿ ಜನ್ಮ ತಾಳಿದ್ದು ನಮ್ಮೆಲ್ಲರ ಅದೃಷ್ಟವಾಗಿದೆ. ಗಾಂಧೀಜಿಯವರದ್ದು ಅದ್ವೈತ ತತ್ವ ಸಿದ್ಧಾಂತವಾಗಿದೆ. ಗಾಂಧೀಜಿಯವರು ತಮ್ಮನ್ನು ತಾವೇ ಹಿಂಸಿಸಿಕೊಂಡರೂ ಸಹ ಬೇರೆ ಯಾರನ್ನೂ ಹಿಂಸಿಸಲಿಲ್ಲ ಎಂದು ತಿಳಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಪ್ರಧಾನ ಗುರುದತ್ ಕೃತಿ ಕುರಿತು ಮಾತನಾಡಿದರು. ವೈದ್ಯವಾರ್ತಾ ಪ್ರಕಾಶನದ ನಿರ್ದೇಶಕ ಎಚ್.ಎಂ.ಟಿ. ಲಿಂಗರಾಜೇ ಅರಸ್, ರಾಜ್ಯ ಉಗ್ರಾಣ ನಿಗಮದ ನಿರ್ದೇಶಕ ಜಿ. ರವಿ, ಪುಸ್ತಕದ ಸಂಪಾದಕ, ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ಬಿ.ಆರ್. ನಟರಾಜ್ ಜೋಯಿಸ್, ಪ್ರಕಾಶಕ ಡಾ.ಎಂ.ಜಿ.ಆರ್. ಅರಸ್ ಇದ್ದರು.

key words : mysore-book-santhosh-hegde-lokayuktha-judge