ಮೈಸೂರು,ಜ,24,2020(www.justkannada.in): ಡಿಸಿಯಾಗಿದ್ದ ಶಶಿಕುಮಾರ್ ಸೆಂಥಿಲ್ ರಾಜೀನಾಮೆ ಕೊಡ್ತಾರೆ. ಈ ಸಿಎಎ ಕಾಯ್ದೆಯಿಂದ ನಮ್ಮ ತಾಯಿಗೆ ತೊಂದರೆ ಆಗಿದೆ ಅಂತಾ ಹೇಳ್ತಾರೆ. ಅವರು ಹೇಗೆ ಐಎಎಸ್ ಆದರು ಅಂತ ಈಗ ನನಗೆ ಅನುಮಾನ ಬರ್ತಿದೆ. ಡಿಸಿಯಾಗಿ ತಾಯಿಗೆ ಕಾಯ್ದೆಯಿಂದ ತೊಂದರೆ ಅಂದ್ರೆ ನಗು ಬರ್ತಿದೆ ಎಂದು ಬಿಜೆಪಿ ರಾಷ್ಟ್ರಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವ್ಯಂಗ್ಯವಾಡಿದರು.
ಮೈಸೂರಿನ ನಗರದ ಜೆ.ಕೆ.ಮೈದಾನದಲ್ಲಿ ನಡೆದ ಮಿಮರ್ಶೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಲ್. ಸಂತೋಷ್,ಈ ಕಾನೂನು ನಮ್ಮ ದೇಶದಲ್ಲಿ ಹುಟ್ಟಿದ ಮುಸ್ಲಿಂರಿಗೆ ಸಂಬಂಧ ಪಟ್ಟಿದ್ದಲ್ಲ. ನಮ್ಮ ದೇಶದಲ್ಲಿ ಹುಟ್ಟಿದ ಮುಸ್ಲಿಂರ ಬಳಿ ದಾಖಲಾತಿ ಇಲ್ಲದಿದ್ದರೂ ಅವರಿಗೆ ಏನೂ ತೊಂದರೆ ಆಗುವುದಿಲ್ಲ. ಈ ದೇಶಕ್ಕೆ ಅಕ್ರಮ ನುಸುಳುಕೋರರಾಗಿ ಬಂದಿರುವರಿಗಷ್ಟೇ ತೊಂದರೆಯಾಗಲಿದೆ. ಕೆಲವರು ಇದರ ಮಾಹಿತಿ ಇಲ್ಲದೇ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಈ ಕಾನೂನು ಇಬ್ರಾಹಿಂಗೆ ಸಂಬಂಧಿಸಿದ್ದೇ ಅಲ್ಲ. ಆದರೆ ಆತ ಮಾತಾಡುವಾಗ ಅಸಹ್ಯವಾದ ಹೇಳಿಕೆ ಕೊಡ್ತಾರೆ ಎಂದು ಕಿಡಿಕಾರಿದರು.
ಯಾರನ್ನೋ ಕೇಳಿ ಸಿಎಎ ಕಾಯ್ದೆ ತರಬೇಕಾಗಿಲ್ಲ. ಇದು ಕೇಂದ್ರ ಸರ್ಕಾರದ ಅಧಿಕಾರ. ನಮ್ಮಲ್ಲಿ ಒಂದು ಗಾದೆ ಇದೆ, ಕೋಳಿ ಕೇಳಿ ಖಾರ ಯಾರು ಅರೆಯೋದಿಲ್ಲ. ಅದೇ ರೀತಿ ಒಳ್ಳೆಯ ಕಾಯ್ದೆ ತರೋದಕ್ಕೆ ಅನುಮತಿ ಬೇಕಿಲ್ಲ. ಕೇಂದ್ರ ಸರ್ಕಾರಕ್ಕೆ ಕಾಯ್ದೆ ತರುವ ಅಧಿಕಾರ ಇದೆ. ಅದನ್ನು ಪ್ರಶ್ನಿಸಿ ಕೋರ್ಟ್ಗೆ ಹೋಗಿದ್ದು ಸರಿಯಲ್ಲ ಎಂದು ಬಿ.ಎಲ್ ಸಂತೋಷ್ ಟೀಕಿಸಿದರು.
ನಮ್ಮ ದೇಶ ಹಿಂದೂ ರಾಷ್ಟ್ರವಲ್ಲ, ನಮ್ಮ ದೇಶ ಜಾತ್ಯಾತೀತ ರಾಷ್ಟ್ರವಾಗಿದೆ. ಆದರೆ, ನಮ್ಮ ಪಕ್ಕದ ದೇಶಗಳು ಧರ್ಮಧಾರಿತ ದೇಶಗಳಾಗಿವೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ರಾಜಕಾರಣಿಗಳಾದ ನಾವು ಮುಂದೆ ಎಲೆಕ್ಟ್ ಆಗೋದು ಹೇಗೆ? ಅಂತಾ ಕಾಯೋದಲ್ಲ. ಎಷ್ಟು ವೋಟ್ಗಳಿಂದ ನಾವು ಗೆಲ್ಲೋದು ಅಂತ ಯೋಚಿಸುವುದಲ್ಲ. ದೇಶಕ್ಕಾಗಿ ಏನಾದ್ರೂ ಕೆಲಸ ಮಾಡಬೇಕು. ಜನರಿಗೆ ಉಪಯುಕ್ತವಾದ ಕೆಲಸ ಮಾಡಬೇಕು ಎಂದು ರಾಜಕಾರಣಿಗಳಿಗೆ ಬಿ.ಎಲ್ ಸಂತೋಷ್ ಕಿವಿಮಾತು ಹೇಳಿದರು.
ಬೇರೆ ದೇಶದಿಂದ ನಮ್ಮ ದೇಶಕ್ಕೆ ಬಂದಿರುವ ಜನರಲ್ಲಿ ಶೇಕಡ 68ರಷ್ಟು ಜನರು ದಲಿತರಾಗಿದ್ದಾರೆ. ಅವರಿಗೆ ದೇಶದ ಪೌರತ್ವ ಕೊಡೋದು ತಪ್ಪಾ ? ಅವರಿಗೆ ನಾವು ಪೌರತ್ವ ಕೊಡದೇ ಇನ್ಯಾರು ಕೊಡಬೇಕು ? ಇದು ದಲಿತರ ವಿರೋಧಿ ಕಾಯ್ದೆ ಅಂತಾ ಅಪಪ್ರಚಾರ ಮಾಡ್ತೀರಾ? ಎಂದು ಪ್ರತಿಪಕ್ಷಗಳ ನಾಯಕರ ವಿರುದ್ಧ ಹರಿಹಾಯ್ದ ಸಂತೋಷ್. ದಿನಕೊಬ್ಬ ನಿರುದ್ಯೋಗಿ ರಾಜಕಾರಣಿ ಪೌರತ್ವ ಕಾಯ್ದೆ ವಿರೋಧಿಸಿ ಮಾತಾಡುತ್ತಾರೆ. ಸಂವಿಧಾನ ಕೊಟ್ಟ ಹಕ್ಕನ್ನು ಯಾವ ಪಕ್ಷವೂ ಕಿತ್ತುಕೊಳ್ಳಲು ಆಗುವುದಿಲ್ಲ. ಅಮಾಯಕ ಜನರಿಗೆ ನಿಮ್ಮ ಆಧಾರ್ ಕಾರ್ಡ್ ಕಿತ್ತು ಕೊಳ್ಳುತ್ತಾರೆ ಅಂತಾ ಹೆದರಿಸುತ್ತಿದ್ದಾರೆ. ನಮ್ಮ ಹಕ್ಕನ್ನು ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ ಕಿತ್ತುಕೊಳ್ಳಲು ಆಗೋದಿಲ್ಲ. ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ, ನಮ್ಮ ಪರವಾಗಿದೆ ಎಂದರು.
ಧಾರ್ಮಿಕ ಕಾರಣಗಳಿಂದಾಗಿ ಅನ್ಯಾಯಕ್ಕೆ ಒಳಗಾಗಿರುವ ಆರು ಧರ್ಮಗಳ ನಾಗರಿಕರಿಗೆ ಸಿಎಎ ಕಾಯ್ದೆಯನ್ವಯ ಭಾರತ ದೇಶದ ಪೌರತ್ವ ನೀಡಲಾಗುತ್ತದೆ. ಇದು ಭಾರತದಲ್ಲಿ ಹುಟ್ಟಿರುವ ಮುಸ್ಲಿಮರಿಗೆ ಸಂಬಂಧಿಸಿದ್ದಲ್ಲ ಎಂದು ಬಿ.ಎಲ್. ಸಂತೋಷ್ ಭರವಸೆ ನೀಡಿದರು.
Key words: mysore- CAA Act- BJP organize general secretary -BL Santosh