ಶ್ರೀ ಚಾಮುಂಡೇಶ್ವರಿ ಕ್ಷೇತ್ರ ನಮ್ಮ ಆಸ್ತಿ: ಪ್ರಾಧಿಕಾರ ರಚನೆಗೆ ನಮ್ಮ ವಿರೋಧ- ಪ್ರಮೋದಾದೇವಿ ಒಡೆಯರ್

ಮೈಸೂರು,ಆಗಸ್ಟ್,12,2024 (www.justkannada.in): ಚಾಮುಂಡೇಶ್ವರಿ ದೇವಸ್ಥಾನ ನಮ್ಮ‌ ಆಸ್ತಿ.  ಹೀಗಾಗಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನಮ್ಮ ವಿರೋಧವಿದೆ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ತಿಳಿಸಿದ್ದಾರೆ.

ಈ ಸಂಬಂಧ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದಾದೇವಿ ಒಡೆಯರ್, ಶ್ರೀ ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ. ಅದು ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಇದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ನಮ್ಮ ವಿರೋಧವಿದೆ. ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಬೆಟ್ಟದ ಅರಮನೆ, ನಂದಿ, ಚಾಮುಂಡೇಶ್ವರಿ ಹಾಗೂ ಮಹಾಬಲೇಶ್ವರ ದೇವಸ್ಥಾನ, ದೇವಿಕೆರೆ ಸುತ್ತಮುತ್ತಲ‌ ಪ್ರದೇಶ ಸೇರಿದೆ. ದೇವಸ್ಥಾನ ಸಂಬಂಧ 2001ರಲ್ಲಿ ಮುಜರಾಯಿ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿದೆ. ಪ್ರಕರಣ ಕೋರ್ಟ್‌ನಲ್ಲಿ ಇರುವಾಗ ಪ್ರಾಧಿಕಾರ ರಚನೆ ಮಾಡುವುದು ಸರಿಯಲ್ಲ. ಹೀಗಾಗಿ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ. ಕೋರ್ಟ್ ಬರಿ ಸ್ಟೇಟಸ್ ಕೋ ಕೊಟ್ಟಿಲ್ಲ, ಪ್ರಾಧಿಕಾರವೇ ಜಾರಿಯಲ್ಲಿ ಇರೊದಿಲ್ಲ. 1950ರಲ್ಲೇ ನಮ್ಮ ಸಂಸ್ಥಾನದಿಂದ ಖಾಸಗಿ ಆಸ್ತಿಗಳ ಪಟ್ಟಿ ಕೊಟ್ಟಿರೋದು. ಕೇಂದ್ರ ಸರ್ಕಾರ 1972ರಲ್ಲಿ ಮಾಡಿರುವ ಆದೇಶದ ಪ್ರಕಾರ ಅವುಗಳನ್ನು ನಾವು ಅನುಭವಿಸಬಹುದು ಎಂದು ತಿಳಿಸಿದ್ದಾರೆ.

ಈಗ ನಾವು ನಿರ್ವಹಣೆ ಮಾಡೋ ಬಗ್ಗೆ ನಾನು ಹೆಚ್ಚೇನು ಮಾತನಾಡುವುದಿಲ್ಲ. ನ್ಯಾಯಾಲಯ, ಸರ್ಕಾರ ಈಗಲೂ ಗ್ರೀನ್ ಸಿಗ್ನಲ್ ಕೊಟ್ಟರೆ ಚಾಮುಂಡಿ ಬೆಟ್ಟವನ್ನ ನಾವೇ ನಿರ್ವಹಣೆ ಮಾಡ್ತೇವೆ‌. ಬೆಟ್ಟವನ್ನು ಬೆಟ್ಟವಾಗಿಯೇ ಉಳಿಸಿಕೋಳ್ಳಬೇಕು ಅನ್ನೋದು ನಮ್ಮ ವಾದ‌. ಸರ್ಕಾರಿ ಖರಾಬು ಅಂತ ಚಾಮುಂಡಿ ಬೆಟ್ಟವನ್ನು ಮಾಡಲು ಆಗೋದಿಲ್ಲ‌. ಕೇವಲ ಖರಾಬು ಅಂತಾ ಮಾತ್ರವೇ ಇದೆ, ಆದ್ರೆ ಸರ್ಕಾರಿ ಖರಾಬು, ಅ ಖರಾಬು ಬ ಖರಾಬು ಅಂತಾ ಇಲ್ಲ ಎಂದು ಪ್ರಮೋದಾ ದೇವಿ ಒಡೆಯರ್ ತಿಳಿಸಿದರು.

ನಮ್ಮ ಖಾಸಗಿ ಆಸ್ತಿಗಳ ರಕ್ಷಣೆಗಾಗಿ ರಾಜಕೀಯ ಪ್ರಭಾವ ಬೀರುವುದಿಲ್ಲ.

ನಮ್ಮ ಖಾಸಗಿ ಆಸ್ತಿಗಳ ರಕ್ಷಣೆಗಾಗಿ ಯಾವುದೇ ಕಾರಣಕ್ಕೂ ರಾಜಕೀಯ ಪ್ರಭಾವ ಬೀರುವುದಿಲ್ಲ. ನನ್ನ ಪತಿ ನಾಲ್ಕು ಬಾರಿ ಸಂಸದರಾಗಿದ್ದರು. ಆಗಲೂ ಅವರು ರಾಜಕೀಯವಾಗಿ ಪ್ರಭಾವ ಬೀರಲಿಲ್ಲ. ಯಾವುದೇ ಅಧಿಕಾರಿಗಳ ಬಳಿ ನಮ್ಮ ಆಸ್ತಿ ರಕ್ಷಣೆಗಾಗಿ ಪ್ರಭಾವ ಬೀರಲಿಲ್ಲ. ಈಗ ನನ್ನ ಮಗ ಸಂಸದನಾಗಿದ್ದಾರೆ. ಅವರ ಮೂಲಕವೂ ನಾನು ಪ್ರಭಾವ ಬೀರುವುದಿಲ್ಲ. ನಾನು ರಾಜಕೀಯದಿಂದ ದೂರ ಇದ್ದೇನೆ. ಕಾನೂನಾತ್ಮಕ ಹೋರಾಟವನ್ನು ಮುಂದುವರಿಸುತ್ತೇ‌‌ನೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

Key words: mysore, Chamundeshwari temple, Pramodadevi Wodeyar