ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಸುಸಜ್ಜಿತ ತಂಗುದಾಣ ಲೋಕಾರ್ಪಣೆಗೆ ಸಿದ್ದ

ಮೈಸೂರು,ಡಿಸೆಂಬರ್,9,2024 (www.justkannada.in): ರೋಗಿಗಳ ಕಡೆಯವರು ತಂಗುವ ಸಲುವಾಗಿ ಪ್ರತಿಷ್ಠಿತ ಮಕ್ಕಳ ಆಸ್ಪತ್ರೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಸುಸಜ್ಜಿತ ಸಂದರ್ಶಕರ ತಂಗುದಾಣ ತಲೆ ಎತ್ತಿದ್ದು ಲೋಕಾರ್ಪಣೆಗೆ ಸಿದ್ದವಾಗಿದೆ.

ಆಸ್ಪತ್ರೆಯಲ್ಲಿ ರೋಗಿಗಳ ಕಡೆಯವರು ತಂಗಲು ಒಂದು ಕಟ್ಟಡ ಇಲ್ಲದೆ ಮರಗಳ ಕೆಳಗೆ ಮಲಗುತ್ತಿದ್ದರು. ಈಗ ಸುಮಾರು 60 ಲಕ್ಷ ರೂಗಳ ವೆಚ್ಚದಲ್ಲಿ ನೂತನ ತಂಗುದಾಣ ನಿರ್ಮಾಣವಾಗಿದೆ. 150 ಹಾಸಿಗೆವುಳ್ಳ ಹೆರಿಗೆ ಮತ್ತು 300 ಹಾಸಿಗೆವುಳ್ಳ ಸಂತಾನ ಹರಣ ಚಿಕಿತ್ಸೆಯ ಏಕೈಕ ಸರ್ಕಾರಿ ಆಸ್ಪತ್ರೆ ನಮ್ಮ ಚೆಲುವಾಂಬ ಆಸ್ಪತ್ರೆ. ಪ್ರತಿ ನಿತ್ಯ ಇಲ್ಲಿಗೆ ನೂರಾರು ರೋಗಿಗಳು ಬರುತ್ತಾರೆ. ರೋಗಿಗಳ ಜೊತೆಗೆ ಬರುವವರಿಗೆ ವಿರಮಿಸಲು ಇದೀಗ ತಂಗುದಾಣದ ವ್ಯವಸ್ಥೆ ಮಾಡಲಾಗಿದೆ. ನೂತನ ತಂಗುದಾಣ ನಿರ್ಮಾಣವಾಗಿರುವುದಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಚೆಲುವಾಂಬ ಆಸ್ಪತ್ರೆ ಅಧೀಕ್ಷಕರಾದ ಡಾ.ರಾಜೇಂದ್ರ ಕುಮಾರ್, ಹಲವು ದಿನಗಳಿಂದ ತಂಗುದಾನದ ಬಗ್ಗೆ ಬೇಡಿಕೆ ಇತ್ತು. ಈಗ ಆ ಬೇಡಿಕೆ ಈಡೇರಿದೆ.  ಇನ್ನು ಸಣ್ಣ ಪುಟ್ಟ ಕೆಲಸಗಳಿವೆ ಅವುಗಳನ್ನು ಮುಗಿಸಿ ಶೀಘ್ರದಲ್ಲೇ ಸ್ಥಳೀಯ ಜನ ಪ್ರತಿನಿಧಿಗಳ ಮೂಲಕ ಉದ್ಘಾಟನೆ ಮಾಡಲಾಗುತ್ತದೆ ಎಂದರು.

ಈ ಹಿಂದೆ ಉಪ ಲೋಕಯುಕ್ತ ಅಧಿಕಾರಿಗಳು ಬಂದಾಗ ಅವರಿಗೆ ಸಾರ್ವಜನಿಕರು ಅಹವಾಲು ಕೊಟ್ಟಿದ್ದರು.  ಅವರ ಸೂಚನೆ ಮೇರೆಗೆ ವಿಶೇಷ ಅನುದಾನದಲ್ಲಿ ಒಂದು ಸುಸಜ್ಜಿತ ತಂಗುದಾಣ ನಿರ್ಮಾಣ ಮಾಡಲಾಗಿದೆ. ರೋಗಿಗಳ ಕಡೆಯವರಿಗೆ ಪಾಸ್ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಪಾಸ್ ಇರುವವರು ಅಲ್ಲಿ ತಂಗಲು ವ್ಯವಸ್ಥೆ ಮಾಡಲಾಗುತ್ತದೆ. ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕವಾಗಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕವಾಗಿ ಸುಮಾರು 50 ಜನ ಮಹಿಳೆಯರು, ಪುರುಷರು ತಂಗುವ ಸ್ಥಳಾವಕಾಶ ಮಾಡಲಾಗಿದೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ರಾಜೇಂದ್ರ ಕುಮಾರ್ ಮಾಹಿತಿ ನೀಡಿದರು.

Key words:  mysore, Cheluvamba Hospital, Patient, Rest place