ಮೈಸೂರು,ಫೆಬ್ರವರಿ,17,2025 (www.justkannada.in): ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಇ-ಆಸ್ತಿ ತಂತ್ರಾಂಶದ ಮೂಲಕ ಆಸ್ತಿಗಳ ಮಾಲೀಕರಿಗೆ ನಮೂನೆ-2/3 ನ್ನು ನೀಡಲು ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆಗಳನ್ನು ನೀಡಲಾಗಿರುವುದರಿಂದ ಅಂತರ್ಜಾಲ http://aasthikanaja.karnatakasmartcity.in/kmf24/ನ ಮೂಲಕ ನಗರದ ಪ್ರತಿಯೊಬ್ಬ ಅಧಿಕೃತ ಆಸ್ತಿಗಳ ಮಾಲೀಕ, ನಾಗರೀಕರು ತಮ್ಮ ಆಸ್ತಿ ಸಂಖ್ಯೆಯನ್ನು ನಮೂದಿಸಿ ಕರಡು ಇ-ಆಸ್ತಿಯ ಪ್ರತಿಯನ್ನು ವೀಕ್ಷಿಸಲು ಹಾಗೂ ಸದರಿ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಯಾವುದೇ ಮಾರ್ಪಾಡು, ತಿದ್ದುಪಡಿಗಳು ಇದ್ದಲ್ಲಿ ಫೆಬ್ರವರಿ 25 ರ ಒಳಗಾಗಿ ಸಂಬoಧ ಪಟ್ಟ ಪಾಲಿಕೆಯ ವಲಯ ಕಚೇರಿಗೆ ಸೂಕ್ತ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ ತಮ್ಮ ಇ-ಆಸ್ತಿ ದಾಖಲೆಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ
ಕರ್ನಾಟಕ ಸರ್ಕಾರವು ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡುವ ಅಭಿಯಾನಕ್ಕೆ ಮುಖ್ಯಮಂತ್ರಿಗಳು ಫೆಬ್ರವರಿ 18 ರಂದು ಬೆಳಿಗ್ಗೆ 11.00 ಗಂಟೆಗೆ Video Conference ಮುಖಾಂತರ ಚಾಲನೆ ನೀಡಲಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ಆಸ್ತಿಗಳ ಲಭ್ಯ ಮಾಹಿತಿಯನ್ನು ಜಾಲತಾಣ: http://aasthikanaja.karnatakasmartcity.in/kmf24/ರಲ್ಲಿ ಪ್ರಚಾರ ಪಡಿಸಿರುತ್ತಾರೆ. ಸದರಿ ಜಾಲತಾಣಕ್ಕೆ ಭೇಟಿ ನೀಡಿ ನಿಮ್ಮ ಸ್ವತ್ತಿನ ಮಾಹಿತಿಯು ಸರಿಯಾಗಿರುವ ಕುರಿತು ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಚುರಪಡಿಸಲಾದ ಸ್ವತ್ತಿನ ಮಾಹಿತಿಯಲ್ಲಿ ತಿದ್ದುಪಡಿಗಳಿದ್ದಲ್ಲಿ ಅಗತ್ಯ ದಾಖಲೆಗಳನ್ನು ನಗರ ಸ್ಥಳೀಯ ಸಂಸ್ಥೆಗೆ ಸಲ್ಲಿಸಿ ತಿದ್ದುಪಡಿ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ.
ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೆ ಸಹ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಇದರಿಂದ ಅನಧಿಕೃತ ಸ್ವತ್ತುಗಳ ಮಾಲೀಕರು ತಮ್ಮ ಸ್ವತಿನ ಕಂದಾಯವನ್ನು ಪಾವತಿಸಿ, ಇ-ಖಾತಾ ಪಡೆಯಬಹುದಾಗಿದೆ. ಇದರಿಂದ ಬಹಳ ದಿನಗಳಿಂದ ಅನಧಿಕೃತ ಸ್ವತ್ತುಗಳ ಖಾತಾ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿದೆ.
ಸ್ವತ್ತಿನ ಮಾಲೀಕರು ತಮ್ಮ ನಗರ ಸ್ಥಳೀಯ ಸಂಸ್ಥೆಗೆ ಭೇಟಿ ನೀಡಿ, ಸ್ವತ್ತಿನ ಮಾಲೀಕತ್ವದ ದಾಖಲೆಗಳಾದ ನೋಂದಾಯಿತ ಪತ್ರಗಳು, ಚಾಲ್ತಿ ಸಾಲಿನವರೆಗೆ ಕಂದಾಯ ಪಾವತಿ ರಶೀದಿ, ಋಣಭಾರ ಪ್ರಮಾಣ ಪತ್ರ, ಹಾಗೂ ಮಾಲೀಕರ ಪೋಟೊ, ಆಧಾರ ಕಾರ್ಡ್, ಸಲ್ಲಿಸಿ 07 ದಿನಗಳ ಒಳಾಗಾಗಿ ಇ-ಖಾತಾ ಪಡೆಯಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ.
ಈ ಕುರಿತು ತಮ್ಮ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಸ್ವತ್ತಿನ ಮಾಲೀಕರುಗಳಿಗೆ ಮಾಹಿತಿ ನೀಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಇ-ಖಾತಾ ನೀಡಲು ಅಗತ್ಯ ಕ್ರಮಕೈಗೊಳ್ಳಲು ಕೋರಲಾಗಿದೆ. ಸದರಿ ಕಾರ್ಯವನ್ನು ಮೂರು ತಿಂಗಳ ಒಳಗೆ ಮುಕ್ತಾಯಗೊಳಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಸರ್ಕಾರದ ಈ ಜನಸ್ನೇಹಿ ನೀತಿಯನ್ನು ಜನಸಾಮಾನ್ಯರಿಗೆ ಇ-ಖಾತಾ ಅಭಿಯಾನದ ಮೂಲಕ ಇ-ಖಾತಾ ಪಡೆಯಲು ಜಾಗೃತಿ ಹಾಗೂ ಅನುವು ಮಾಡಿಕೊಡಲು ಸಹಕರಿಸಬೇಕೆಂದು ಕೋರಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
Key words: Mysore City Corporation, submit, property form, through E-asset