ಮೈಸೂರು, ನವೆಂಬರ್ 7, 2021: ಮೈಸೂರು ನಗರ ಪಾಲಿಕೆ ವಾಹನದ ಚಾಲಕನ ಬೇಜವಾಬ್ದಾರಿ ತಂದಿಟ್ಟ ಅವಾಂತರದಿಂದಾಗಿ ಕೋವಿಡ್ ವಾರಿಯರ್ ಸೇರಿದಂತೆ ನಾಲ್ಕು ಜನ ಆಸ್ಪತ್ರೆಯಲ್ಲಿ ನರಳುವಂತಾಗಿದೆ.
ಮೈಸೂರು ಮಹಾ ನಗರ ಪಾಲಿಕೆಯ ವಾಹನದ ಚಾಲಕನ ಬೇಜವಾಬ್ದಾರಿಯಿಂದ ಕೋವಿಡ್ ವಾರಿಯರ್ ಸೇರಿದಂತೆ ನಾಲ್ಕು ಜನ ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ.
ಕೋವಿಡ್ ವಾರಿಯರ್ ಶೋಭಾ ಮೈಸೂರು ಮಕ್ಕಳ ಕೂಟದಲ್ಲಿ ಸಹಾಯಕ ಕಿರಿಯ ಆರೋಗ್ಯ ಸಹಾಯಕಿಯಾಗಿ ಸಹಸ್ರಾರು ಜನರಿಗೆ ಕೋವಿಡ್ ಲಸಿಕೆ ನೀಡುತ್ತಾ ಸೇವೆ ಸಲ್ಲಿಸುತ್ತಿದ್ದರು. ಶನಿವಾರ ಸೇವೆ ಸಲ್ಲಿಸಿ ವಾಪಾಸಾಗುತ್ತಿದ್ದಾಗ ಶ್ರೀರಾಂಪುರದ ನಾಗಮ್ಮ ಕಲ್ಯಾಣ ಮಂಟಪ(ನಾಡಿಗ ಭವನ)ದ ಬಳಿ ಮೈಸೂರು ಮಹಾನಗರ ಪಾಲಿಕೆಯ ಈ ವಾಹನದ ಚಾಲಕ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿಕೊಂಡು ಬಂದು ಶೋಭಾ ಅವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಈ ರಭಸಕ್ಕೆ ಶೋಭಾ ಆಕೆಯ ತಮ್ಮ ಹಾಗೂ ಮಕ್ಕಳಿಬ್ಬರಿಗೆ ಗಂಭೀರ ಗಾಯಗಳಾಗಿ ಖಾಸಗಿ ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ಈ ಗಾಯಾಳುಗಳಿಗೆ ಆಸ್ಪತ್ರೆಯ ವೆಚ್ಚವನ್ನು ಭರಿಸುವ ಸಾಧ್ಯವಾಗದ ಪರಿಸ್ಥಿತಿ ಇದೆ. ಮೈಸೂರು ಮಹಾನಗರ ಪಾಲಿಕೆಯೇ ಈ ಅಪಘಾತದ ಹೊಣೆ ಹೊತ್ತು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸಬೇಕಾಗಿದೆ. ಈ ಕೂಡಲೇ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಈ ಗಾಯಾಳುಗಳ ಚಿಕಿತ್ಸೆಗೆಂದು ಪರಿಹಾರವನ್ನು ಬಿಡುಗಡೆಗೊಳಿಸಿ ಜವಾಬ್ದಾರಿ ಮೆರೆಯಬೇಕಾಗಿದೆ ಎಂದು ನ್ಯಾಯವಾದಿ ಪಿ.ಜೆ.ರಾಘವೇಂದ್ರ ಆಗ್ರಹಿಸಿದ್ದಾರೆ.