ಮೈಸೂರು,ಡಿ,14,2019(www.justkannada.in): ಬೆಂಗಳೂರು ನಂತರ ಎರಡನೇ ರಾಜಧಾನಿಯಾಗಿರುವ ಮೈಸೂರು ಮಹಾನಗರಪಾಲಿಕೆಯ ಮೇಯರ್-ಉಪಮೇಯರ್ ಆಡಳಿತ ಕೊನೆಗೊಂಡು ತಿಂಗಳು ಕಳೆಯುತ್ತಿದ್ದರೂ ರಾಜ್ಯಸರಕಾರ ಮೀಸಲಾತಿ ಪ್ರಕಟಿಸದೆ ವಿಳಂಬ ನಡೆಯನ್ನ ಅನುಸರಿಸುತ್ತಿದೆ. ಸರಕಾರ ಪ್ರಕಟಿಸುವ ಮೀಸಲಾತಿಗಾಗಿ ಮೂರು ರಾಜಕೀಯ ಪಕ್ಷಗಳು ಎದುರು ನೋಡುತ್ತಿರುವ ಜತೆಗೆ ಚುನಾವಣಾ ದಿನಾಂಕವನ್ನ ಕಾದು ಕೂರುವಂತಾಗಿದೆ.
ಹುಣಸೂರು ಕ್ಷೇತ್ರದ ಉಪ ಚುನಾವಣೆಯ ನೀತಿ ಸಂಹಿತೆ ಅಡ್ಡಿ ಇಲ್ಲದೆ ಇದ್ದರೂ ನಗರಾಭಿವೃದ್ಧಿ ಇಲಾಖೆಯು ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸದ ಪರಿಣಾಮ ಹಾಲಿ ಮೇಯರ್-ಉಪಮೇಯರ್ ಆಡಳಿತದಲ್ಲಿ ಮುಂದುವರೆದಿದ್ದಾರೆ. ಮೈಸೂರು ಮಹಾನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಬಿಜೆಪಿ ಅತಿ ಹೆಚ್ಚಿನ 22ಸ್ಥಾನ ಗೆಲ್ಲುವ ಜತೆಗೆ ಶಾಸಕರಿಬ್ಬರು, ಸಂಸದರನ್ನ ಸೇರಿಸಿ 25ಸ್ಥಾನ ಹೊಂದಿತ್ತು. ಆದರೆ, ರಾಜ್ಯದಲ್ಲಿ ದೋಸ್ತಿ ಸರಕಾರ ಇದ್ದ ಪರಿಣಾಮ ಬಿಜೆಪಿ ಸಂಬಂಧವನ್ನ ಕಡಿದುಕೊಂಡ ಜೆಡಿಎಸ್ ಕಾಂಗ್ರೆಸ್ ಜತೆಗೆ ಕೈ ಜೋಡಿಸಿತ್ತು. ಇದರಿಂದಾಗಿ ಕಳೆದ 2018ರ ನವೆಂಬರ್ 17 ರಲ್ಲಿ ಮೇಯರ್ ಆಗಿ ಕಾಂಗ್ರೆಸ್ನ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಆಗಿ ಜಾತ್ಯತೀತ ಜನತಾದಳದ ಷಫೀ ಅಹಮದ್ ನೇಮಕವಾಗಿದ್ದರು. ನವಂಬರ್ 16ಕ್ಕೆ ಮೈಸೂರು ನಗರಪಾಲಿಕೆಯ ಹಾಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಮತ್ತು ಉಪಮೇಯರ್ ಶಫಿ ಅಹಮ್ಮದ್ರ ಅವಧಿ ಮುಕ್ತಾಯವಾಗಿದ್ದರೂ ನಿಯಮಾನುಸಾರ ನೂತನ ಮೇಯರ್ ಆಯ್ಕೆ ಪ್ರಕ್ರಿಯೆ ನಡೆಯುವ ತನಕ ಮುಂದುವರಿಯುವ ಅವಕಾಶ ಇದೆ. ಆಡಳಿತಾತ್ಮಕ ಅಧಿಕಾರ ಇಲ್ಲದಿದ್ದರೂ ಉಳಿದಂತೆ ಎಲ್ಲಾ ಅಧಿಕಾರ ಸೌಲಭ್ಯ ಹೊಂದಿ ಆಡಳಿತದಲ್ಲಿ ಮುಂದುವರೆದಿದ್ದಾರೆ.
ಮೀಸಲಾತಿ ನಿಗದಿಗಾಗಿ ಕಾತರ….
ನಗರಪಾಲಿಕೆಯ ಮೇಯರ್-ಉಪಮೇಯರ್ ಮೀಸಲಾತಿ ಪ್ರಕಟವಾದ ಬಳಿಕವಷ್ಟೇ ಚುನಾವಣಾಧಿಕಾರಿಗಳೂ ಆಗಿರುವ ಪ್ರಾದೇಶಿಕ ಆಯುಕ್ತರು ಚುನಾವಣಾ ದಿನಾಂಕ ನಿಗದಿಪಡಿಸಬೇಕಾಗಿದೆ. ಏಕೆಂದರೆ ರೋಸ್ಟರ್ ಪ್ರಕಾರ ಪರಿಶಿಷ್ಟ ಪಂಗಡ ಅಥವಾ ಬಿಸಿಎಂ(ಬಿ)ವರ್ಗಕ್ಕೆ ಮೀಸಲಾತಿ ದೊರೆತಿಲ್ಲ. ಹೀಗಾಗಿ, ಈ ಬಾರಿ ಪರಿಶಿಷ್ಟ ಪಂಗಡಕ್ಕೆ ಅವಕಾಶ ಸಿಗಬಹುದೆಂದು ಅನೇಕರು ಕಾದು ಕೂತಿದ್ದಾರೆ. ಹುಣಸೂರು ಉಪ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಅಡ್ಡಿ ಬರಬಹುದೆಂದುಹೇಳಲಾಗಿತ್ತಾದರೂ ಆಯೋಗವೇ ಮಹಾನಗರಪಾಲಿಕೆಗೆ ಅನ್ವಯವಾಗಲ್ಲವೆಂದು ಹೇಳಿತ್ತು. ಇದರಿಂದಾಗಿ ಮೇಯರ್ ಚುನಾವಣೆಗೆ ಮೀಸಲಾತಿ ಪ್ರಕಟಿಸಬಹುದೆಂದು ಇಟ್ಟುಕೊಂಡಿದ್ದ ನಿರೀಕ್ಷೆ ಹುಸಿಯಾಯಿತು. ಅಷ್ಟೇ ಏಕೇ ಈಗ ಉಪ ಚುನಾವಣೆ ಫಲಿತಾಂಶ ಬಂದು ಮೂರು ದಿನ ಕಳೆದರೂ ನಗರಾಭಿವೃದ್ಧಿ ಇಲಾಖೆ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸದೆ ಇರುವುದು ಗಮನಾರ್ಹವಾಗಿದೆ.
ಹೊಂದಾಣಿಕೆ ಮುರಿಯುತ್ತಾ-ಕಡಿಯುತ್ತಾ..
ಕಳೆದ ಬಾರಿಯ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರ ಇದ್ದ ಕಾರಣಕ್ಕಾಗಿ ಪಾಲಿಕೆಯೂ ದೋಸ್ತಿಯಾಗಿತ್ತು.ಆದರೆ, ಇದೀಗದೋಸ್ತಿ ಸರಕಾರ ಪತನವಾಗಿ ಬಿಜೆಪಿಸರಕಾರ ಅಧಿಕಾರಕ್ಕೆ ಬಂದಿದೆ. ದೋಸ್ತಿ ನಾಯಕರು ಈಗ ಹಾವು-ಮುಂಗೋಸಿಯಂತೆ ಆರೋಪ-ಪ್ರತ್ಯಾರೋಪದಲ್ಲಿ ಮುಳುಗಿದ್ದಾರೆ. ಇದರ ನಡುವೆ ಜಿಲ್ಲೆಯ ಜೆಡಿಎಸ್ ಶಾಸಕರಲ್ಲೂ ಹೊಂದಾಣಿಕೆ ಇಲ್ಲದಂತಾಗಿದೆ. ಜೆಡಿಎಸ್-ಕಾಂಗ್ರೆಸ್ ನಡುವಿನ ಆಂತರಿಕ ಒಪ್ಪಂದದಂತೆ ಎರಡನೇ ಅವಧಿಯ ಮೇಯರ್ ಜೆಡಿಎಸ್ ಪಾಲಾಗಿ ಸಿಕ್ಕಿದರೆ, ಉಪಮೇಯರ್ ಕಾಂಗ್ರೆಸ್ ಸಿಗಬೇಕಿದೆ. ಆದರೆ, ಕಾಂಗ್ರೆಸ್ ಜತೆ ಸ್ನೇಹ ಕಡಿದುಕೊಂಡು ಬಿಜೆಪಿ ಜತೆ ಕೈಜೋಡಿಸಿದರೆ ಉಪ ಮೇಯರ್ ಪಡೆಯಬೇಕಾಗುತ್ತದೆ. ಏಕೆಂದರೆ ಅತಿ ಹೆಚ್ಚಿನ ಸದಸ್ಯರ ಬಲವನ್ನ ಹೊಂದಿರುವ ಬಿಜೆಪಿ ಉಪ ಮೇಯರ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲ್ಲ. ಹೀಗಾಗಿ, ಜೆಡಿಎಸ್ ಮೀಸಲಾತಿ ನಿಗದಿಪಡಿಸುವುದನ್ನ ಕಾದು ಕೂತಿದೆ. ಜೆಡಿಎಸ್ನಲ್ಲಿ ಸಾ.ರಾ.ಮಹೇಶ್-ಜಿ.ಟಿ.ದೇವೇಗೌಡರ ಬಣವೆಂದು ಇಬ್ಬಾಗವಾಗಿದ್ದು,ಕೆಲವು ಸದಸ್ಯರು ಗೌಡರ ಕ್ಯಾಂಪ್ನಲ್ಲಿ ಇದ್ದಾರೆ. ಸಾ.ರಾ.ಮಹೇಶ್ ಕೈಗೊಳ್ಳುವ ನಿಲುವಿಗೆ ಕೆಲವರು ಸಮ್ಮತಿಸದೆ ಗೌಡರ ಮಾತನ್ನು ಕೇಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಮುಂದೆ ಮೈತ್ರಿ ಕಾಯದೆ ಮೇಯರ್ ಸ್ಥಾನ ಹಿಡಿಯಲು ಕಾರ್ಯತಂತ್ರ ರೂಪಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಎಸ್ಟಿಗೆ ಮೀಸಲಾದ್ರೆ ಮೂರು ಪಕ್ಷಗಳಲ್ಲೂ ಪೈಪೋಟಿ
ಮೇಯರ್ ಸ್ಥಾನ ಎಸ್ಟಿಗೆ ಮೀಸಲಾದರೆ ಮೂರು ಪಕ್ಷಗಳಲ್ಲೂ ಪೈಪೋಟಿ ಶುರುವಾಗಲಿದೆ. ಕಾಂಗ್ರೆಸ್ನಿಂದ ಲೋಕೇಶ್ ಪಿಯಾ, ಜೆಡಿಎಸ್ನಿಂದ ಎಂ.ಎಸ್.ಶೋಭಾ, ಬಿಜೆಪಿಯಿಂದ ಗುರುವಿನಾಯಕ ಇದ್ದಾರೆ. ಮತ್ತೊಂದೆಡೆ ತಳವಾರ,ಪರಿವಾರ ತತ್ಕ್ಷಣದಲ್ಲಿ ಲೋಕಸಭೆಯಲ್ಲಿ ಅನುಮೋದನೆ ಪಡೆದು ಗೆಜೆಟ್ ನೋಟಿಫಿಕೇಷನ್ ಹೊರಡಿಸಿದರೆ ಹಿಂದುಳಿದ ವರ್ಗದಿಂದ ಆಯ್ಕೆಯಾಗಿರುವ ಶಿವಕುಮಾರ್ ಸಹ ಮೇಯರ್ ಸ್ಥಾನದ ಮೀಸಲಾತಿಗೆ ಬರಲಿದ್ದಾರೆ. ಹೀಗಾಗಿ, ಮೇಯರ್ ಸ್ಥಾನ ಎಸ್ಟಿಗೆ ಮೀಸಲಿಟ್ಟರೆ ಅಧಿಕಾರದ ಗದ್ದುಗೆಗೆ ಸೆಣಸಾಟ ನಡೆಯವುದು ಖಚಿತ.
Key words: mysore –city corporation- Mayor-Deputy Mayor- Reservation- Delay