ಮೈಸೂರು, ಡಿ.26, 2021 : (www.justkannada.in news) ರೈತರು ಎಲ್ಲಾ ರಾಜಕೀಯ ಪಕ್ಷಗಳ ಬೆನ್ನೆಲುಬಿದ್ದಂತೆ. ಚಳವಳಿ ಹಾಗು ರಾಜಕಾರಣದ ನಡುವೆ ಸಂಬಂಧ ಇರಬೇಕಿತ್ತು. ಆದರೆ ವಾಸ್ತವದಲ್ಲಿ ಹಾಗಾಗಲಿಲ್ಲ. ಆಹಾರ ಕೊಂಡುಕೊಂಡವನ ಜೇಬು ಭರ್ತಿಯಾಗಿದೆ. ಆಹಾರ ಉತ್ಪಾದನೆ ಮಾಡಿದ ರೈತನ ಜೇಬು ಖಾಲಿಯಾಗಿದೆ.
ಇಲ್ಲಿನ ಕಲಾಮಂದಿರದಲ್ಲಿ ಇಂದು ಆಯೋಜಿಸಿದ್ದ ರೈತ ಸಮಾವೇಶ ಹಾಗೂ ರೈತ ಹೋರಾಟದಲ್ಲಿ 40ವರ್ಷ ಪೂರೈಸಿರುವ ಕುರುಬೂರು ಶಾಂತಕುಮಾರ್ ಸನ್ಮಾನ ಸಮಾರಂಭದಲ್ಲಿ ಕುರುಬೂರು ಶಾಂತಕುಮಾರ್ ಗೆ ರೈತರತ್ನ ಬಿರುದು,ಅಭಿನಂದನಾ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಿ ಮಾತನಾಡಿದರು.
ಉತ್ಪಾದನೆ ಕಡಿಮೆ ಆದರೂ ಸಮಸ್ಯೆ, ಹೆಚ್ಚಾದರೂ ಸಮಸ್ಯೆಯಾಗಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆಹಾರ ಉತ್ಪಾದನೆ ಜಾಸ್ತಿಯಾಗಿದೆ. ಕೃಷಿ ಮತ್ತು ರೈತನ ಮೇಲೆ ನಮ್ಮ ಲಕ್ಷ್ಯ ಇರಬೇಕು. ರೈತರ ಆದಾಯ ಹೆಚ್ಚಾದರೆ ರೈತಾಪಿ ವರ್ಗದ ಸ್ಥಿತಿ ಸುಧಾರಿಸಲಿದೆ.
ಕೇವಲ ಕೃಷಿಯ ಆದಾಯದಿಂದ ರೈತನ ಬದುಕು ಹಸನಾಗುತ್ತಿಲ್ಲ ಹಾಗಾಗಿ ಇತರ ಮೂಲಗಳಿಂದ ರೈತರ ಆದಾಯ ಹೆಚ್ಚಿಸುವ ಚಿಂತನೆಯನ್ನು ಸರ್ಕಾರ ಮಾಡುತ್ತಿದೆ.
ಬೆಳೆ ನಿಯಂತ್ರಣ, ಬೆಲೆ ನಿಗಧಿ ಬಹು ದೊಡ್ಡ ಸಮಸ್ಯೆಯಾಗಿದೆ. ಡಬ್ಯ್ಲುಟಿಒ ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮ ನಮ್ಮ ಹಣೆ ಬರಹ ಬದಲಾಯಿತು. ಈ ರೀತಿಯ ಒಪ್ಪಂದಗಳಿಗೆ ಸಹಿ ಹಾಕಿದಾಗ ದೂರಗಾಮಿ ಪರಿಣಾಮಗಳು ಬೀರುತ್ತವೆ. ಇದೆಲ್ಲದರ ಪರಿಣಾಮ ಸಾಲದ ಸಂಕೋಲೆಯಲ್ಲಿ ರೈತ ಸಿಲುಕಿದ್ದಾನೆ.
ಅಂತರರಾಷ್ಟ್ರೀಯ ಮಾರುಕಟ್ಟೆ ನಿಯಂತ್ರಣ ವ್ಯವಸ್ಥೆಯಿಂದ ಹೊರ ಬಂದರೆ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಮೈಷುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಶ್ರೀರಾಮ ಸಕ್ಕರೆ ಕಾರ್ಖಾನೆಯ ಪುನರಾರಂಭಕ್ಕೆ ಎದುರಾಗಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಲು ಸಹ ಕ್ರಮ ಕೈಗೊಳ್ಳಲಾಗುವುದು.
ರೈತರ ಪರ ರಾಜ್ಯ ಸರ್ಕಾರ ಗಟ್ಟಿಯಾಗಿ ನಿಲ್ಲಲಿದೆ. ರೈತರ ಧ್ವನಿಗೆ ನಾವು ಧ್ವನಿಯಾಗಲಿದ್ದೇವೆ. ಮೈಸೂರಿನ ಕಲಾಮಂದಿರದಲ್ಲಿ ನಡೆದ ರೈತ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ.
ರೈತ ಸಮಾವೇಶದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೈತ ಪರ ಕಾಳಜಿವುಳ್ಳವರಾಗಿದ್ದಾರೆ. ರೈತರಿದ್ದರಷ್ಟೇ ಜಗತ್ತು ಬದುಕಲಿದೆ, ಉಳಿಯಲಿದೆ. ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಬೇಕು, ಅತಿವೃಷ್ಠಿಯಿಂದಾದ ಬೆಳೆ ಹಾನಿಗೆ ಸೂಕ್ತ ಪರಿಹಾರವನ್ನು ರೈತರು ಕೇಳುತ್ತಾರೆ. ಯಾವುದೇ ಗಂಭೀರ ಸಮಸ್ಯೆ ಎದುರಾದರೂ ರೈತರು ಎದೆಗುಂದಬಾರದು, ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಆತ್ಮಹತ್ಯೆಯಂತಹ ಯೋಚನೆ ಮಾಡಬಾರದು.
ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಲಿದೆ, ಅಲ್ಲದೇ ಬೆಳೆದ ಉತ್ಪನ್ನಗಳನ್ನು ಸೇವಿಸುವ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆ ಮಾಡಬಾರದು ಎಂದರು.
key words : Mysore-cm-basavaraja-bommaiha-former’s-meet-felicitation