ಮೈಸೂರು,ಮಾರ್ಚ್,29,2024(www.justkannada.in): ಸಿದ್ದರಾಮಯ್ಯರ ಗ್ಯಾರಂಟಿ ಮುಂದೆ ಮೋದಿ ಅಲೆ ಇಲ್ಲ ಎಂದು ಮಾಜಿ ಸಚಿವ ಕೋಟೆ ಎಂ ಶಿವಣ್ಣ ಹೇಳಿದರು.
ಕಾಂಗ್ರೆಸ್ ಸೇರ್ಪಡೆ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಕೋಟೆ ಶಿವಣ್ಣ ಕಾಂಗ್ರೆಸ್ ಸದಸ್ಯತ್ವ ಪಡೆದರು. ಕಚೇರಿಯಲ್ಲಿ ಮಾತನಾಡಿದ ಅವರು, ಮೋದಿ ಅಲೆ ಕೆಲವು ಕಡೆ ಇರಬಹುದು. ರಾಜ್ಯದಲ್ಲಿ ಸಿದ್ದರಾಮಯ್ಯ ಗ್ಯಾರಂಟಿ ಮುಂದೆ ಮೋದಿ ಅಲೆ ನಡೆಯಲ್ಲ. ಬಿಜೆಪಿಯಲ್ಲಿ ಈ ಹಿಂದೆ ಇದ್ದ ಸಿದ್ದಾಂತ ಈಗ ಇಲ್ಲ. ನಾನೊಬ್ಬ ಹಿರಿಯ ನಾಯಕನಾಗಿದ್ದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಕೆಲವು ನಾಯಕರ ಹೆಸರನ್ನ ಹೇಳಲ್ಲ ಅವರು ತಮಗಿಷ್ಟ ಬಂದವರಿಗೆ ಹುದ್ದೆ ನೀಡುವ ಕೆಲಸ ಮಾಡುತ್ತಾರೆ. ನಾನು ಈ ಹಿಂದೆ ಕಾಂಗ್ರೆಸ್ ನಲ್ಲಿದ್ದವನೇ. ಮತ್ತೆ ಕಾಂಗ್ರೆಸ್ ಸೇರಿದ್ದು, ಸದಸ್ಯತ್ವ ಪಡೆದಿದ್ದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಭಾಗದಲ್ಲೂ ಸಂಚರಿಸಿ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತೇನೆ ಎಂದರು.
ನನ್ನ ಜೀವನದ ಕೊನೆ ಉಸಿರು ಇರುವತನಕ ಕಾಂಗ್ರೆಸ್ ನಲ್ಲಿರುತ್ತೇನೆ. ನಾನು ಎಲ್ಲಾ ಪಕ್ಷದಲ್ಲೂ ಕೆಲಸ ಮಾಡಿದ್ದೇನೆ. ಜೀವನದ ಕೊನೆ ದಿನಗಳಲ್ಲಿ ಮತ್ತೆ ಕಾಂಗ್ರೆಸ್ ಗೆ ಬಂದಿದ್ದೇನೆ. ಎಲ್ಲಾ ಸಮುದಾಯಗಳನ್ನ ಸಮಾನವಾಗಿ ಕಾಣುವ ಪಕ್ಷ ಕಾಂಗ್ರೆಸ್. ನಾನು ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ ಅಂದುಕೊಂಡಿರಲಿಲ್ಲ. ಸಿಎಂ ಸಿದ್ದರಾಮಯ್ಯನವರು ನನ್ನ ಜೊತೆ ಮಾತನಾಡಿದಾಗ ರೋಮಾಂಚನೆಗೊಂಡೆ. ಕಾಂಗ್ರೆಸ್ ಸೇರ್ಪಡೆಯಾಗುವ ವಿಚಾರ ಬಂದ ತಕ್ಷಣ ರಾಜ್ಯದ ಮೂಲೆ ಮೂಲೆಗಳಿಂದ ದೂರವಾಣಿ ಕರೆಗಳು ಬಂದವು ಎಂದರು.
ಮೈಸೂರು- ಕೊಡಗು ಕ್ಷೇತ್ರದ ಎಂ. ಲಕ್ಷ್ಮಣ್ ಸಮರ್ಥ ಅಭ್ಯರ್ಥಿಯಾಗಿದ್ದಾರೆ. ಪಕ್ಷದ ನಾಯಕರ ಅನುಮತಿ ಪಡೆದು ಪ್ರಚಾರಕ್ಕೆ ಹೋಗುತ್ತೇನೆ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ಕೋಟೆ ಶಿವಣ್ಣ ಹೇಳಿದರು.
Key words: mysore, Congress, Kote Shivanna.