ಮೈಸೂರು,ಫೆಬ್ರವರಿ,10,2022(www.justkannada.in): ಭ್ರಷ್ಟಾಚಾರಕ್ಕೆ ಕಡಿವಾಣ, ಪ್ಯಾಕೇಜ್ ಪದ್ದತಿ ರದ್ದು ಮತ್ತು ಬಾಕಿ ಮೊತ್ತ ಬಿಡುಗಡೆಗೆ ಆಗ್ರಹಿಸಿ ಪತ್ರ ಚಳುವಳಿ ನಡೆಸಲು ರಾಜ್ಯದ ಗುತ್ತಿಗೆದಾರರು ಮುಂದಾಗಿದ್ದು, ರಾಜ್ಯದಾದ್ಯಂತ ಇರುವ 50 ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ರವಾನೆ ಮಾಡಿದ್ದಾರೆ.
ಈ ಪತ್ರ ಚಳವಳಿಗೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಮಾರ್ಚ್ 3 ಅಥವಾ 4 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಡಿ. ಕೆಂಪಣ್ಣ, ಗುತ್ತಿಗೆ ಕಾಮಗಾರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಕಳೆದ 2017ರಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಯಾವುದೇ ಗುತ್ತಿಗೆ ಕಾಮಗಾರಿಯಲ್ಲೂ 40% ಕಮೀಷನ್ ನೀಡಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರಿಗೆ 4 ಬಾರಿ ಪತ್ರ ಬರೆದರೂ ಯಾವುದೇ ಉತ್ತರ ಸಿಗಲಿಲ್ಲ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದೆವು. ನರೇಂದ್ರ ಮೋದಿ ಅವರಿದಲೂ ಸೂಕ್ತ ಉತ್ತರ ಬಂದಿಲ್ಲ. ಮೊದಲು 5% ಕಮೀಷನ್ ನೀಡಲಾಗುತ್ತಿತ್ತು. ಆದರೆ 2017ರಿಂದ 40% ಕಮೀಷನ್ ಗೆ ಬಂದು ನಿಂತಿದೆ. ನಮ್ಮ ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರಿದ್ದೇವೆ. ಈ ಪೈಕಿ 17 ಸಾವಿರ ಕ್ಲಾಸ್ ಒನ್ ಕಂಟ್ರಾಕ್ಟರ್ ಗಳಿದ್ದಾರೆ. ಇದರಲ್ಲಿ 296 ಮಂದಿ ಹೊರ ರಾಜ್ಯದವರಿದ್ದಾರೆ.
ಬೇರೆ ಯಾವ ರಾಜ್ಯದಲ್ಲೂ ಹೊರ ರಾಜ್ಯದ ಗುತ್ತಿಗೆದಾರರಿಗೆ ಅವಕಾಶವಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಹೊರ ರಾಜ್ಯದ ಗುತ್ತಿಗೆದಾರರಿಗೆ ಅವಕಾಶ ನೀಡಲಾಗಿದೆ. ಹೊರಗಿನವರು ಬೋಗಸ್ ಬಿಲ್ ಕೊಡ್ತಾರೆ. ಕಾಮಗಾರಿ ಪಡೆಯುವ ಸಲುವಾಗಿಯೇ ಜನಪ್ರತಿನಿಧಿಗಳಿಗೆ ಇಂತಿಷ್ಟು ಹಣ ಕೊಡಬೇಕು. ಇಲ್ಲದಿದ್ದರೇ ಕಾಮಗಾರಿಯನ್ನೇ ಕೊಡುವುದಿಲ್ಲ. ಅವರಿಗೆ ಇಷ್ಟ ಬಂದವರಿಗೆ ಟೆಂಡರ್ ಕೊಡುತ್ತಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಇವೆ. ಅಗತ್ಯ ಬಿದ್ದರೇ ಆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದರು.
ಕಾಮಗಾರಿಯನ್ನು ಗುತ್ತಿಗೆ ನೀಡುವಾಗ ನಿಯಮಗಳನ್ನು ಪಾಲಿಸುತ್ತಿಲ್ಲ. ಹಿರಿತನವನ್ನು ಪರಿಗಣಿಸುತ್ತಿಲ್ಲ. ಇದರ ವಿರುದ್ಧ ಕಳೆದ ಮೂರ್ನಾಲ್ಕು ತಿಂಗಳಿಂದ ಹೋರಾಟ ನಡೆಸುತ್ತಿದ್ದೇವೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇವೆ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಡಿ ಕೆಂಪಣ್ಣ ಹೇಳಿದರು.
Key words: mysore- Contractors – letter- movement.