ಎಲೆಮರೆಕಾಯಿಯಂತೆ ಕರ್ತವ್ಯ ನಿರ್ವಹಿಸಿದ ಮೈಸೂರಿನ ‘ ರಿಯಲ್ ಕರೋನಾ ವಾರಿಯರ್ಸ್ ‘

 

ಮೈಸೂರು, ಜು.28, 2021 : (www.justkannada.in news) ಏಪ್ರಿಲ್-ಮೇ ತಿಂಗಳಲ್ಲಿ  ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿದ್ದ ದೇಶದ ಹತ್ತು ಜಿಲ್ಲೆಗಳಲ್ಲಿ ಒಂದಾಗಿದ್ದ ಮೈಸೂರು ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ.೧.೫ಕ್ಕೆ ಇಳಿದಿದೆ. ಇದಕ್ಕಾಗಿ ಕೆಲ ಅಧಿಕಾರಿಗಳು ಎಲೆಮರೆಕಾಯಿಯಂತೆ ಹಗಲಿರುಳು ಶ್ರಮಿಸಿದ್ದು ಪ್ರಮುಖ ಕಾರಣ.

ಇಂಥ ಅಧಿಕಾರಿಗಳು ಯಾವ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಅಥವಾ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ಬಾರದಿರುವುದು ವಿಪರ್ಯಾಸವೆ ಸರಿ. ಕಳೆದ ಒಂದು ವರ್ಷದಿಂದ ತೆರೆಮರೆಯಲ್ಲಿ ಶ್ರಮಿಸಿದ ಇಂಥ ಕಿರಿಯ ಅಧಿಕಾರಿಗಳನ್ನು ಪರಿಚಯಿಸುವ ಪ್ರಯತ್ನ ‘ ಜಸ್ಟ್ ಕನ್ನಡ’ ದ ಈ ಲೇಖನದ್ದು.

ಮೈಸೂರು ಉಪ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಈಗ ಮುಡಾ ಕಾರ್ಯದರ್ಶಿಯಾಗಿರುವ ಡಾ.ಎನ್.ಸಿ.ವೆಂಕಟರಾಜು, ಜಿಲ್ಲಾ ಗ್ರಂಥಾಲಯ ಉಪ ನಿರ್ದೇಶಕ ಡಾ.ಮಂಜುನಾಥ್, ಆಯುಷ್ ಇಲಾಖೆ ಉಪ ನಿರ್ದೇಶಕಿ ಡಾ.ಬಿ.ಎಸ್.ಸೀತಾಲಕ್ಷ್ಮೀ, ಆರೋಗ್ಯ ಇಲಾಖೆ ಡಿಎಂಒ ಡಾ.ಸಿ.ಚಿದಂಬರ,  ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿಂದಿಯಾ, ಜಿಲ್ಲಾ ಸಶ್ತ್ರ ಚಿಕಿತ್ಸಕಿ ಡಾ.ರಾಜೇಶ್ವರಿ, ಡಾ.ಸಿರಾಜ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಕೊರೊನಾ ನಿಯಂತ್ರಣಕ್ಕೆ ತೆರೆಯ ಹಿಂದೆ ಕಾರ್ಯ ನಿರ್ವಹಿಸಿದ ಕರೋನಾ ವಾರಿಯರ್ಸ್.

jk

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತೀರ್ಮಾನವಾಗುವ ಎಲ್ಲ ಅಂಶಗಳನ್ನು ಚಾಚುತಪ್ಪದೇ ಪಾಲನೆ ಮಾಡುತ್ತಿದ್ದದ್ದು ಈ ಅಧಿಕಾರಿಗಳೇ. ಅದರಲ್ಲೂ ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ, ‘ಮಾತು ಕಡಿಮೆ-ಹೆಚ್ಚು ಕೆಲಸ ‘ ತತ್ವ ಪಾಲಿಸಿದ್ದರಿಂದ ಕೊರೊನಾ ಕೇಸ್ ಕ್ರಮೇಣವಾಗಿ ಇಳಿಕೆಗೆ ಪ್ರಮುಖ ಕಾರಣ.

ಯಾರ್ಯಾರ ಸೇವೆ ಹೇಗಿತ್ತು?:

ಮೈಸೂರು ಉಪ ವಿಭಾಗಾಧಿಕಾರಿಯಾಗಿದ್ದ ಡಾ.ಎನ್.ಸಿ.ವೆಂಕಟರಾಜು ಅವರು ಕೆಆರ್‌ಎಸ್ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾಡಲು ಬೇಕಾದ ವ್ಯವಸ್ಥೆ ಮಾಡಲು ಎರಡು ತಿಂಗಳು ಶ್ರಮ ಹಾಕಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಸಣ್ಣ ಉಪಕರಣಗಳು ಇಲ್ಲದೆ ಕಾರ್ಯ ನಿರ್ವಹಿಸಲು ಹಿಂದೇಟು ಹಾಕಿದ್ದ ವೈದ್ಯರನ್ನು ಮನವೊಲಿಸಿ ಆಸ್ಪತ್ರೆಗೆ ಕರೆತರುವ ಜತೆಗೆ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಆಕ್ಸಿಜನ್,ವೆಂಟಿಲೇಟರ್, ಸಾಮಾಗ್ರಿಗಳು ತಲುಪುವಂತೆ ನೋಡಿಕೊಂಡರು.
ತಳಹಂತದಿಂದ ಕೆಲಸ ಮಾಡಿ ಜಿಲ್ಲಾ ಆಸ್ಪತ್ರೆ ಯಾವುದೇ ತೊಂದರೆ ಇಲ್ಲದೆ ನಿರಂತರವಾಗಿ ನಡೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಾರ್‌ರೂಂಗೆ ಬರುತ್ತಿದ್ದ ದೂರವಾಣಿ ಕರೆಗಳನ್ನು ಆಧರಿಸಿ ಟ್ರಯಜ್ ಮತ್ತು ಹೋಂಕ್ವಾರಂಟೇನ್‌ನಲ್ಲಿರುವವರನ್ನು ನೋಡಿಕೊಂಡು ಅವರನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸುವಂತೆ ನೋಡಿಕೊಂಡಿದ್ದರು. ಹೋಂ ಕ್ವಾರಂಟೇನ್‌ನಲ್ಲಿ ಇದ್ದವರಿಗೆ ಬೇಕಾದ ಮಾತ್ರೆ, ಊಟೋಪಚಾರದ ವ್ಯವಸ್ಥೆ ತಲುಪುವಂತೆ ಮಾಡಿದರೆ,

ಆಹಾರ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ಅವರು ಟೆಲಿಮಾನಿಟರಿಂಗ್ ಸೆಂಟರ್‌ನ ಸಂಪೂರ್ಣ ಹೊಣೆ ಹೊತ್ತು ಕೆಲಸ ಮಾಡಿದ್ದರು. ಹಗಲು-ರಾತ್ರಿ ಎನ್ನದೆ ಯಾವುದೇ ದೂರು ಬಂದರೂ ಪರಿಗಣಿಸಿ ಅದನ್ನು ಸಂಬಂಧಿಸಿದವರ ಗಮನಕ್ಕೆ ತಂದು ಆಸ್ಪತ್ರೆಗೆ ರೋಗಿಯು ದಾಖಲಾಗುವಂತೆ ನೋಡಿಕೊಳ್ಳುತ್ತಿದ್ದರು.

ಇನ್ನು ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಹೆಚ್ಚು ಟೆಸ್ಟ್‌ಗಳನ್ನು ಮಾಡುವಂತೆ ಸೂಚನೆ ಕೊಡುತ್ತಿದ್ದಂತೆ ಅದರ ಜವಾಬ್ದಾರಿ ಹೊತ್ತವರು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸಿ.ಚಿದಂಬರ ಅವರು. ತಮ್ಮ ಅಧಿಕಾರಿಗಳು, ಸಿಬ್ಬಂದಿ ತಂಡ ಕಟ್ಟಿಕೊಂಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರ್‌ಟಿಪಿಸಿಆರ್ ಟೆಸ್ಟ್‌ಗಳನ್ನು ಮಾಡಿಸಿ,ಅದನ್ನು ಲ್ಯಾಬ್‌ಗೆ ತಲುಪುವಂತೆ ಮಾಡುತ್ತಿದ್ದರು. ಕೊಳಚೆ ಪ್ರದೇಶದ ಜನರು,ಅಲ್ಪಸಂಖ್ಯಾತರು ಟೆಸ್ಟ್‌ಗೆ ಹಿಂದೇಟು ಹಾಕಿದಾಗ ಅವರನ್ನು ಮನವೊಲಿಸಿ ಟೆಸ್ಟ್ ಮಾಡುವ ಮೂಲಕ ಹರಡದಂತೆ ನೋಡಿಕೊಂಡಿದ್ದರು.

ಅದೇ ರೀತಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಅವರು ಹೋಂ ಐಸೊಲೇಷನ್‌ನಲ್ಲಿ ಇದ್ದವರನ್ನು ಗಮನಿಸಿಕೊಂಡು ವೈದ್ಯರ ತಂಡದೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸಿ ಕೆಲಸ ಮಾಡಿದ್ದಾರೆ. ಹೋಂ ಐಸೊಲೇಷನ್ ಇದ್ದಾಗಲೇ ಉಸಿರಾಟದ ತೊಂದರೆಗೆ ಸಿಲುಕಿ ರಾತ್ರಿ ವೇಳೆ ಕರೆ ಮಾಡಿದರೂ ನಿದ್ರೆಯಿಂದ ಎದ್ದು ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ನೋಡಿಕೊಂಡಿದ್ದಾರೆ. ಇದರಿಂದಾಗಿ ಅನೇಕರು ಸಕಾಲದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೀವ ತಮ್ಮ ಉಳಿಸಿಕೊಂಡಿದ್ದಾರೆ.

ಕೊರೊನಾ ಸೋಂಕಿತರನ್ನು ನೋಡಲು ಸಾಧ್ಯವಾಗದ ಸನ್ನಿವೇಶದಲ್ಲಿ ಮೃತರ ಅಂತ್ಯಕ್ರಿಯೆ ಹೊಣೆ ಹೊತ್ತಿದ್ದ ಡಾ.ಸಿರಾಜ್ ಅಹಮದ್ ಅವರು ಇದುವರೆಗೂ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸುವಲ್ಲಿ ಕೆಲಸ ಮಾಡುತ್ತಿದ್ದಾರೆ. ನಗರದ ಸ್ಮಶಾನಗಳು, ಖಬರ್‌ಸ್ಥಾನಗಳಲ್ಲಿ ಅಂತ್ಯಕ್ರಿಯೆಗೆ ಬೇಕಾದ ವ್ಯವಸ್ಥೆಯನ್ನು ಒದಗಿಸಿದ್ದರೂ ಒಂದೊಂದು ದಿನ ೧೦ರಿಂದ ೨೦ ಮೃತದೇಹಗಳ ಅಂತ್ಯಕ್ರಿಯೆ ಮಾಡಿಸುವ ತನಕ ಜಾಗ ಬಿಟ್ಟು ಕದಲುತ್ತಿರಲಿಲ್ಲ. ಎಷ್ಟೋ ದಿನಗಳು ಅವರು ತಮ್ಮ ಮನೆಗೆ ತೆರಳದೆ ಕಾರ್ಯ ನಿರ್ವಹಿಸಿದ್ದಾರೆ.

ಇನ್ನು ಮಂಡಕಳ್ಳಿ ಕೋವಿಡ್ ಕೇರ್ ಸೆಂಟರ್‌ನ ಉಸ್ತುವಾರಿ ಹೊತ್ತಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿಂದಿಯಾ ಅವರು ಪ್ರತಿನಿತ್ಯ ಊಟ,ತಿಂಡಿ,ಬಿಸಿನೀರು ಸೇರಿ ಇನ್ನಿತರ ವ್ಯವಸ್ಥೆಗಳನ್ನು ಸಕಾಲಕ್ಕೆ ಕಲ್ಪಿಸುವಂತೆ ನೋಡಿಕೊಳ್ಳುವಲ್ಲಿ ಸಫಲವಾಗಿದ್ದರು. ಸೋಂಕಿತರು ಮಾನಸಿಕವಾಗಿ ಜರ್ಝರಿತವಾಗದಂತೆ ಮನರಂಜನಾ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬಿಸಿದ್ದರು.ಅದರಲ್ಲೂ ಬೆಳಿಗ್ಗೆ ಮತ್ತು ರಾತ್ರಿ ಹೊತ್ತು ತಿಂಡಿ,ಊಟ ವ್ಯವಸ್ಥೆ ಮಾಡಿಸುವುದು ಸುಲಭವಲ್ಲ. ಸ್ವಲ್ಪ ವ್ಯತ್ಯಾಸವಾದರೂ ಸೋಂಕಿತರು ಅತೃಪ್ತಿ ವ್ಯಕ್ತಪಡಿಸುತ್ತಿದ್ದರಿಂದಾಗಿ ಅವರಿಗೆ ಸಕಾಲಕ್ಕೆ ತಲುಪವಂತೆ ನೋಡಿಕೊಂಡಿದ್ದರು.

ಇನ್ನು ಜಿಲ್ಲಾ ಗ್ರಂಥಾಲಯ ಉಪ ನಿರ್ದೇಶಕ ಡಾ.ಮಂಜುನಾಥ್ ಅವರು ವಾರ್ ರೂಂ ಹೊಣೆ ನೋಡಿಕೊಂಡು ಸ್ವಯಂಸೇವಕರನ್ನು ಕಟ್ಟಿಕೊಂಡು ಎಷ್ಟೇ ದೂರವಾಣಿ ಕರೆ ಬಂದರೂ ಅದನ್ನು ನೋಟ್ ಮಾಡಿಕೊಂಡು ಬೆಡ್‌ಗಳು, ಹೋಂ ಐಸೊಲೇಷನ್, ವೈದ್ಯರ ಜತೆ ಆಪ್ತ ಸಮಾಲೋಚನೆ ಸೇರಿ ಇನ್ನಿತರ ವ್ಯವಸ್ಥೆ ನೋಡಿಕೊಂಡಿದ್ದರಿಂದಾಗಿ ೬,೫೦೦ ಕರೆಗಳು ಬಂದಿವೆ. ವಾರ್ ರೂಂಗೆ ಬಂದಿದ್ದ ೬,೫೦೦ ಕರೆಗಳಲ್ಲಿ ೪ಸಾವಿರ ಮಂದಿಗೆ ಸರ್ಕಾರಿ,ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಒದಗಿಸಿದ್ದು ವಿಶೇಷ.

jk

ತೆರೆಮರೆಯಲ್ಲಿ ಸದ್ದಿಲ್ಲದೆ ಕೆಲಸ ನಿರ್ವಹಿಸಿದ ಈ ರಿಯಲ್ ಕರೋನಾ ವಾರಿಯರ್ಸ್ ಗಳಿಗೊಂದು ಸಲಾಂ..

—pp——

key words : Mysore-corona-control-real-warriors-officers-work-Mysore