ಮೈಸೂರು, ಏ.20, 2020 : (www.justkannada.in news ) ಆಧುನಿಕ ತಂತ್ರಜ್ಞಾನದ ಪೈಪೋಟಿ ನಡುವೆಯೂ ಬಲು ಕಷ್ಟದಿಂದ ವೃತ್ತಿಬದುಕು ನಡೆಸುತ್ತಿರುವ ಮಡಿವಾಳ ಸಮಾಜ, ಕೊರೊನಾ ವೈರಾಣುವಿನ ಸೋಂಕಿನ ಭಯದಿಂದಲೂ ಮುಂದಿನ ದಿನಗಳಲ್ಲಿ ವೃತ್ತಿಜೀವನ ನಡೆಸಬೇಕಾದ ಆತಂಕ ಎದಿರಿಸುತ್ತಿದೆ ಎಂದು ಶಾಸಕ ಎಲ್.ನಾಗೇಂದ್ರ ಅಭಿಪ್ರಾಯಪಟ್ಟರು.
ಕುಕ್ಕರಳ್ಳಿ ಕೆರೆಯ ಮಡಿವಾಳ ಮಹಾಜನ ಸೇವಾ ಸಂಘದ ಮಡಿ ಕಟ್ಟೆಯಲ್ಲಿ ವೃತ್ತಿ ಮಾಡುತ್ತಿರುವವರಿಗೆ ಸೋಮವಾರ ಆಹಾರ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಶಾಸಕ ನಾಗೇಂದ್ರ ಹೇಳಿದಿಷ್ಟು..
ಕೊರೊನಾ ಲಾಕ್ಡೌನ್ ಸಮಸ್ಯೆಗಳಿಂದ ವೃತ್ತಿ ಮಾಡುತ್ತಿದ್ದವರ ಬದುಕುಗಳು ಸಂಕಷ್ಟಕ್ಕೀಡಾಗಿದೆ ಅದರಲ್ಲೂ ವಿಶೇಷವಾಗಿ ಮಡಿವಾಳ ಸಮಾಜದ ಪರಿಸ್ಥಿತಿ ಶೋಚನೀಯವಾಗಿದ್ದು ಬಹಳ ಆತಂಕದಲ್ಲಿದ್ದಾರೆ.
ಕರೋನಾ ಹಾವಳಿ ಕಡಿಮೆಯಾದರೂ ಸಹ ಮುಂದೆ ಅವರ ವೃತ್ತಿಜೀವನದ ಆತಂಕ ಹಾಗೂ ಸಂಕಷ್ಟಗಳಿಗೆ ಸರಕಾರ ಅವರೊಡನೆ ನಿಂತು ಆರೋಗ್ಯ ಇಲಾಖೆಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಸೂಚಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡ ಹಾಗೂ ಬಿಜೆಪಿ ಮುಖಂಡ ಆರ್.ರಘು ಕೌಟಿಲ್ಯ, ಮಡಿವಾಳ ವೃತ್ತಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮನುಷ್ಯರ ನೇರ ಸಂಪರ್ಕಕ್ಕೆ ಒಳಪಟ್ಟಿದ್ದು ಈ ವೃತ್ತಿಯಲ್ಲಿ ವ್ಯಕ್ತಿ ಅಥವಾ ಅವರು ಉಪಯೋಗಿಸುವ ಬಟ್ಟೆಗಳನ್ನು ಸ್ಪರ್ಶಿಸಿಯೇ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ವೃತ್ತಿ ಮಾಡುವ ಸಮುದಾಯದ ಬಂಧುಗಳು ಕೊರೊನಾ ವೈರಸ್ ಬಗೆಗಿನ ಆತಂಕದಲ್ಲಿದ್ದಾರೆ.
ಆದರೆ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ನಿಮ್ಮೊಂದಿಗೆ ನಾವಿದ್ದೇವೆ ಸಮಾಜ ಹಾಗೂ ವೃತ್ತಿಗೆ ಭಂಗಬಾರದ ರೀತಿಯಲ್ಲಿ ನಿಮ್ಮ ಆರೋಗ್ಯದ ದೃಷ್ಟಿಯಿಂದ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ ಅವರೊಂದಿಗೆ ನಾವು ಸಹ ಈ ನಿಟ್ಟಿನಲ್ಲಿ ನಿಮ್ಮೊಂದಿಗಿದ್ದೇವೆ ಎಂದು ಆಶ್ವಾಸನೆ ನೀಡಿದರು.
ಕೇವಲ ಮೀಸಲಾತಿ ಹಾಗೂ ನಮ್ಮ ಸಾಮಾಜಿಕ ನ್ಯಾಯದ ಜೊತೆಗೆ ವೃತ್ತಿ ಮಾಡಿ ಬದುಕನ್ನು ಕಟ್ಟುವುದರೊಂದಿಗೆ ಆರೋಗ್ಯವನ್ನು ಉಳಿಸಿಕೊಳ್ಳುವುದು ಬಹುದೊಡ್ಡ ಸವಾಲಾಗಿದೆ. ಈ ಕೊರೊನಾ ಸಂದರ್ಭದಲ್ಲಿ ಸಮುದಾಯ ಸಂಕಷ್ಟಕ್ಕೀಡಾಗಿದೆ ಎಂಬುದನ್ನು ಸರ್ಕಾರದ ಗಮನ ಸೆಳೆಯಲು ಅವಕಾಶವಾದಂತಾಗಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ನಿಮ್ಮ ಕಷ್ಟಸುಖಗಳಿಗೆ ಭಾಗಿಯಾಗಲಿದ್ದೇವೆ ಎಂದು ಆರ್.ರಘು ತಿಳಿಸಿದರು
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ವೇದಾವತಿ, ಸಂಘದ ಅಧ್ಯಕ್ಷ ಚೌಡಯ್ಯ ಹಾಗೂ ಮಾಜಿ ಅಧ್ಯಕ್ಷ ಗೋಪಾಲ್ ಸಮಾಜದ ಮುಖಂಡರಾದ ದುದ್ದಗೆರೆ ಶಿವಣ್ಣ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
key words : mysore-corona-food-kits-madivala-community-raghu-bjp-mla-nagendra