ಮೈಸೂರು, ಮೇ 24, 2021 : (www.justkannada.in news) ಕೊರೊನಾ ಮಹಾಮಾರಿ ಹಲವಾರು ಸಮಸ್ಯೆಗಳಿಗೆ ಎಡೆಮಾಡಿದೆ. ಈ ಸಮಸ್ಯೆಗಳನ್ನು ಎದುರಿಸಲು ಸ್ವಯಂ ಸೇವಾ ಸಂಸ್ಥೆಗಳ ಜತೆಗೆ ಮೈಸೂರು ಮಹಾನಗರ ಪಾಲಿಕೆ ಕೈಜೋಡಿಸಿದೆ. ವಿನೂತನ ‘ ರಿವರ್ಸ್ ಐಸೋಲೇಷನ್ ‘ ಯೋಜನೆ ಇದೇ ಬುಧವಾರದಿಂದ ಕಾರ್ಯರೂಪಕ್ಕೆ ಬರಲಿದ್ದು, ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ.
ಇದೇ ಮೊದಲ ಬಾರಿಗೆ ವಿನೂತನ ರಿವರ್ಸ್ ಐಸೋಲೇಷನ್ ಪ್ರಯೋಗಕ್ಕೆ ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ಈ ಯೋಜನೆಗೆ ಸ್ವಯಂಸೇವಾ ಸಂಸ್ಥೆಗಳಾದ ಆರೋಗ್ಯ ಭಾರತಿ, ಸೇವಾ ಭಾರತಿ, ಜಿಎಸ್ಎಸ್ ನಂತ ಸಂಸ್ಥೆಗಳು ಕೈಜೋಡಿಸಿವೆ.
ಕರೋನಾದಿಂದ ಕೆಲ ಕುಟುಂಬಗಳು ಮಕ್ಕಳನ್ನು ಕಳೆದುಕೊಂಡರೆ, ಮತ್ತೆ ಕೆಲವರು ತಂದೆ-ತಾಯಿಗಳನ್ನೇ ಕಳೆದುಕೊಂಡು ದಿಕ್ಕು ತೊಚದೆ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಇಂಥವರ ನೆರವಿಗೆ ಇದೀಗ ‘ ರಿವರ್ಸ್ ಐಸೋಲೇಷನ್ ‘ ಯೋಜನೆ ಮೂಲಕ ನೆರವಿನ ಹಸ್ತ ಚಾಚಲಾಗುತ್ತಿದೆ . ಇದು ರಾಜ್ಯದಲ್ಲೇ ಪ್ರಪ್ರಥಮ ಯೋಜನೆ ಎಂಬುದು ಮೈಸೂರಿನ ಹೆಗ್ಗಳಿಕೆ.
ಈ ಯೋಜನೆ ಬಗ್ಗೆ ಆರೋಗ್ಯ ಭಾರತಿ ಸಂಸ್ಥೆಯ ಮುಖ್ಯಸ್ಥ ಡಾ. ಚಂದ್ರಶೇಖರ್ ಅವರು ಜಸ್ಟ್ ಕನ್ನಡ ಜತೆ ಮಾತನಾಡಿದರು.
ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರಿಂದ ಆ ಮನೆಯಲ್ಲಿರುವ ಮಕ್ಕಳು ಅಥವಾ ಹಿರಿಯರಿಗೆ ಸೋಂಕು ಹರಡದಂತೆ ತಡೆಯಲು ಈ ರಿವರ್ಸ್ ಹೋಂ ಐಸೋಲೇಷನ್ ಸಹಕಾರಿ . ಮೈಸೂರಿನ ಪ್ರಮತಿ ಹಿಲ್ ವ್ಹೀವ್ ಶಾಲೆಯಲ್ಲಿ ಇದಕ್ಕೆ ಅಗತ್ಯ ಸಿದ್ಧತೆ ಮಾಡಲಾಗಿದೆ. ಆರಂಭದಲ್ಲಿ 60 ಮಂದಿಗೆ ಊಟ,ವಸತಿ ಕಲ್ಪಿಸಲಾಗುತ್ತದೆ. ಬಳಿಕ ಇದನ್ನು 100 ಮಂದಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ.
ಕೋವಿಡ್ ನೆಗಟಿವ್ ವರದಿ ಬಂದವರಿಗೆ ಇಲ್ಲಿ ಆಶ್ರಯ ಕಲ್ಪಿಸಲಾಗುತ್ತದೆ. ಅವರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ದಿನ ಬೆಳಗ್ಗೆ ಯೋಗಾ, ಪ್ರಾಣಾಯಾಮ, ಭಜನೆ ನಂತರ ತಿಂಡಿ ನೀಡಲಾಗುತ್ತದೆ. ನಂತರ ಚರ್ಚೆಗೆ ಅವಕಾಶ. ಆ ನಂತರ ಮಧ್ಯಾಹ್ನ ಊಟ, ಬಳಿಕ ಸದಭಿರುಚಿ ಸಿನಿಮಾ ತೋರಿಸಲಾಗುತ್ತದೆ. ಸಂಜೆ ಇಂಡೋರ್ ಗೇಮ್, ಮೈದಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಆಟಗಳನ್ನಾಡಿಸುವುದು, ಪುಸ್ತಕ ಓದು, ರಾತ್ರಿ ಊಟ. ಇದಿಷ್ಟು 10 ದಿನಗಳ ಕಾಲ ನಿರಂತರ ವ್ಯವಸ್ಥೆ ಮಾಡಲಾಗುತ್ತದೆ. ಒಟ್ಟಾರೆ ರಿವರ್ಸ್ ಹೋಂ ಐಸೋಲೇಷನ್ ಕೇಂದ್ರಕ್ಕೆ ದಾಖಲಾಗುವವರ ದೈಹಿಕ ಹಾಗೂ ಮಾನಸಿಕ ದೃಢತೆಗೆ ಹೆಚ್ಚಿನ ಒತ್ತು ನೀಡುವುದು ಉದ್ದೇಶ ಎಂದು ಡಾ. ಚಂದ್ರಶೇಖರ್ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪನಾಗ್ ಮಾತನಾಡಿ, ಕರೋನಾ ಸೋಂಕಿತರ ನೆರವಿಗೆ ಈಗಾಗಲೇ ‘ಸ್ಟೆಪ್ ಡೌನ್ ‘ ಆಸ್ಪತ್ರೆಗಳನ್ನು ಪ್ರಾರಂಭಿಸಲಾಗಿದೆ. ಅದೇ ರೀತಿ ಕೋವಿಡ್ ನಿಂದ ಗುಣಮುಖ ಹೊಂದಿ ಸ್ವಸಾಮರ್ಥ್ಯದಿಂದ ದೈನಂದಿನ ಜೀವನ ನಡೆಸಲು ಶಕ್ತರಾಗದವರ ಹಾಗೂ ಕೋವಿಡ್ ತಂದ ಸಾವಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳು ಅಥವಾ ಮಕ್ಕಳನ್ನು ಕಳೆದುಕೊಂಡ ಹಿರಿಯರಿಗೆ ನೆರವಾಗುವುದೇ’ ರಿವರ್ಸ್ ಹೋಂ ಐಸೋಲೇಷನ್ ‘ ಯೋಜನೆ ಉದ್ದೇಶ. ಇದಕ್ಕೆ ಸ್ವಯಂ ಸೇವಾ ಸಂಸ್ಥೆಗಳೇ ಮುಂದು ಬಂದಿದ್ದು, ಪಾಲಿಕೆ ಅವರಿಗೆ ಬೇಕಾಗದ ಅನುಕೂಲಗಳನ್ನು ಮಾಡಿಕೊಡುತ್ತಿದೆ ಎಂದರು.
key words : mysore-corona-home-reverse-isolation-MCC-commissioner-shilapa.nag-IAS