ಮೈಸೂರು,ಜು,27,2020(www.justkannada.in): ವೈದ್ಯರು ಸೇರಿದಂತೆ ಪೊಲೀಸರ ನಿರ್ಲಕ್ಷ್ಯದಿಂದಾಗಿ ಕೊರೊನಾ ಸೋಂಕಿತ ವೃದ್ಧ ನಾಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ನಗರದ ಲಷ್ಕರ್ ಮೊಹಲ್ಲಾದ ಗರಡಿಕೇರಿ ನಿವಾಸಿ ಕೂಸಪ್ಪ(76) ವೃದ್ಧ ನಾಪತ್ತೆಯಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೂಸಪ್ಪರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ನಂತರ ಕೆ.ಆರ್. ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ಹಿನ್ನೆಲೆ. ಆರೋಗ್ಯ ಇಲಾಖೆ ಸಿಬ್ಬಂದಿ ಬಂದು ಕೂಸಪ್ಪ ಅವರನ್ನ ಮೇಟಗಳ್ಳಿಯಲ್ಲಿರುವ ಕೋವಿಡ್ ಆಸ್ಪತ್ರೆಗೆ ಕಳೆದ ಗುರುವಾರ ದಾಖಲಿಸಿದ್ದಾರೆ.
ಈ ವೇಳೆ ಕೂಸಪ್ಪ ಅವರ ಪುತ್ರ ವಿಜಯ್ ಅವರು, ಕೂಸಪ್ಪ ಅವರಿಗೆ ಸ್ಮರಣ ಶಕ್ತಿ ಕಡಿಮೆಯಿದೆ ಹುಷಾರಾಗಿ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದರು.ಶನಿವಾರ ಬೆಳಗ್ಗೆ ಕೂಸಪ್ಪ ಆಸ್ಪತ್ರೆಯಿಂದ ಹೊರ ಬಂದಿದ್ದು, ನಾಪತ್ತೆಯಾಗಿದ್ದಾರೆ. ವಿಜಯ್ ಅವರ ಸ್ನೇಹಿತರೋಬ್ಬರು ನಿಮ್ಮ ತಂದೆಯನ್ನು ಪಡುವಾರಹಳ್ಳಿ ಬಳಿ ನೋಡಿದೆ ಎಂದು ಹೇಳಿದಾಗ ಆತಂಕಗೊಂಡ ವಿಜಯ್, ಆಸ್ಪತ್ರೆಗೆ ಬಂದು ವಿಚಾರಿಸಿದ್ದಾರೆ. ಆಗ ಅಲ್ಲಿನ ಸಿಬ್ಬಂದಿ, ನಿಮ್ಮ ತಂದೆ ಎಲ್ಲಿಯೂ ಹೋಗಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ.
ಭಾನುವಾರ ಬೆಳಗ್ಗೆ ತಂದೆ ಇರುವ ಬಗ್ಗೆ ಅನುಮಾನಗೊಂಡು ವಿಚಾರಿಸಲು ಬಂದಾಗ, ಆಸ್ಪತ್ರೆಯ ವೈದ್ಯರು ಕೂಸಪ್ಪ ಎಂಬ ಹೆಸರಿನ ಯಾವ ರೋಗಿಯು ಆಸ್ಪತ್ರೆಯಲ್ಲಿ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದರಿಂದ ಆತಂಕಗೊಂಡ ವಿಜಯ್ ಎಲ್ಲೆಡೆ ತಂದೆಗಾಗಿ ಹುಡುಕಾಟ ನಡೆಸಿದ್ದು, ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯೊಂದಿಗೆ ಭದ್ರತಾ ಕಾರ್ಯದಲ್ಲಿದ್ದ ಪೊಲೀಸರ ನಿರ್ಲಕ್ಷ್ಯದಿಂದ ನಮ್ಮ ತಂದೆ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೂಸಪ್ಪರ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
Key words: mysore- Coronavirus -infected -missing