ಮೈಸೂರು, ನ.19, 2019 : (www.justkannada.in news ) : ಪತಿ ನಿಧನದ ಬಳಿಕ ಮಾನಸಿಕ ಖಿನ್ನತೆಗೊಳಗಾಗಿ ಒಬ್ಬಂಟಿಯಾಗಿದ್ದ ವೃದ್ದೆಯೊರ್ವರ ಬಗ್ಗೆ ಮಾಹಿತಿ ಪಡೆದ ನಗರ ಪಾಲಿಕೆ ಸದಸ್ಯರೊಬ್ಬರು, ಆಕೆಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೈಸೂರಿನ ಕುಂಬಾರಬೇರಿ ನಿವಾಸಿ , 65 ವರ್ಷದ ಗೋದಾವರಿ ಎಂಬುವವರೇ ಪತಿ ಕಳೆದುಕೊಂಡು ಒಬ್ಬಂಟಿ ಜೀವನ ಸಾಗಿಸುತ್ತಿದ್ದ ವೃದ್ಧೆ. ಈ ಬಗ್ಗೆ ವಾರ್ಡ್ ನ ಜನತೆ ನೀಡಿದ ಮಾಹಿತಿ ಮೇರೆಗೆ ಕಾರ್ಯೋನ್ಮುಕರಾದ ಕಾರ್ಪೋರೇಟರ್ ಲೊಕೇಶ್ ವಿ.ಪಿಯಾ, ಒಬ್ಬಂಟಿ ಮಹಿಳೆಯ ರಕ್ಷಣೆಗೆ ಧಾವಿಸಿ ವೃದ್ಧಾಶ್ರಮಕ್ಕೆ ಸೇರಿಸಿದರು.
ಏನಿದು ಘಟನೆ :
ಮೈಸೂರಿನ ಕುಂಬಾರಗೇರಿ ಮೊದಲನೇ ಕ್ರಾಸ್ ನಿವಾಸಿ ಗೋದಾವರಿ ಪತಿ ಸತ್ಯನಾರಾಯಣ ಜತೆ ನೆಲೆಸಿದ್ದರು. ವೃತ್ತಿಯಲ್ಲಿ ಪೂಜಾರಿಯಾಗಿದ್ದ ಸತ್ಯನಾರಾಯಣ ಕೆಲ ವರ್ಷಗಳ ಹಿಂದೆ ಮೃತಪಟ್ಟರು. ಪತಿ ನಿಧನದ ಬಳಿಕ ಗೋದಾವರಿ ಒಬ್ಬಂಟಿಯಾದರು. ಮಕ್ಕಳಿಲ್ಲದ ಇವರಿಗೆ ಸಂಬಂಧಿಕರು ಸಹ ದೂರಾದರು. ಇದರಿಂದ ಖಿನ್ನತೆಗೆ ಒಳಗಾದ ಗೋದಾವರಿ ಒಬ್ಬಂಟಿಯಾಗಿಯೇ ಕಾಲ ಕಳೆಯಲಾರಂಭಿಸಿದರು. ಆದರೆ ಕೆಲ ಸಮಯದ ಬಳಿಕ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದರು. ಆಗ ನೆರೆಹೊರೆಯವರೇ ಗೋದಾವರಿ ಅವರಿಗೆ ಊಟೋಪಚಾರದ ಮೂಲಕ ಆರೈಕೆಗೆ ಮುಂದಾದರು.
ಈ ನಡುವೆ ಗೋದಾವರಿ ಅವರ ಆರೋಗ್ಯ ತೀರಾ ಬಿಗಾಡಿಸಿತು. ಆಗಲೇ ಸ್ಥಳೀಯ ಕಾರ್ಪೋರೇಟರ್ ಲೊಕೇಶ್ ವಿ.ಪಿಯಾ (ವಾರ್ಡ್ ನಂ. 50) ಅವರ ಗಮನಕ್ಕೆ ವಿಷಯ ತಂದರು. ಕೂಡಲೇ ಇದಕ್ಕೆ ಸ್ಪಂಧಿಸಿದ ಲೊಕೇಶ್, ಸ್ವಯಂಸೇವಾ ಸಂಘಟನೆ ನೆರವಿನಿಂದ ವೃದ್ಧೆ ಗೋದಾವರಿಗೆ ಆಸರೆ ಕಲ್ಪಿಸಲು ಮುಂದಾದರು. ಸ್ಥಳೀಯರಾದ ಗಣೇಶ್ ಬಾಬು, ಪ್ರಕಾಶ್, ನಾಗೇಶ್ ನಾಯ್ಕ ಅವರು ಜತೆಯಲ್ಲಿದ್ದು ಮಹಿಳೆಯನ್ನು ಸ್ವಯಂಸೇವಾ ಸಂಸ್ಥೆಗೆ ದಾಖಲಿಸಲು ನೆರವಾದರು.
ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಮೈಸೂರಿನ ರಾಮಕೃಷ್ಣನಗರದಲ್ಲಿರುವ ಅಕ್ಯೂಮೆನ್ ಲ್ಯಾಬ್ಸ್ ಚಾರಿಟಬಲ್ ಟ್ರಸ್ಟ್ ನ ನವ್ಯ ಅವರು ಹೇಳಿದಿಷ್ಟು….
ಕುಂಬಾರಗೇರಿ ನಿವಾಸಿ ಮಹಿಳೆ ಗೋದಾವರಿ ಅವರನ್ನು ನಮ್ಮ ಸಂಸ್ಥೆಗೆ ಕರೆತಂದಾಗ ಅವರು ಸಂಪೂರ್ಣ ನಿತ್ರಾಣಗೊಂಡಿದ್ದರು. ಅವರನ್ನು ದಾಖಲಿಸುವ ಮುನ್ನವೇ ವೈದ್ಯೋಪಚಾರ ಮಾಡಿ ಡ್ರಿಪ್ಸ್ ಹಾಕಿಸಿದ್ದರು. ಸಂಸ್ಥೆಗೆ ದಾಖಲು ಮಾಡಿಕೊಂಡ ಕೂಡಲೇ ಅವರಿಗೆ ವೈದ್ಯೋಪಚಾರ ನೀಡಲಾಗುತ್ತಿದೆ. ರಕ್ತದೊತ್ತಡದ ಪ್ರಮಾಣ ಕಡಿಮೆ ಇದ್ದು, ಅವರ ದೇಹದಲ್ಲಿ ಆಮ್ಲಜನಕದ ಪ್ರಮಾಣ ಸಹ ಕಡಿಮೆ ಇದೆ. ಆದ್ದರಿಂದ ಇದನ್ನು ಮೊದಲಿಗೆ ಗುಣಪಡಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುತ್ತಿದೆ ಎಂದರು.
key words : mysore-corporator-lokesh.piya-mcc-old-lady