ಮೈಸೂರು, ಡಿಸೆಂಬರ್ 12, 2019 (www.justkannada.in): ನಗರದ ವಾರ್ಡ್ ವ್ಯಾಪ್ತಿಯ ಗಡಿ ಗೊಂದಲ ಸ್ವಚ್ಚ ನಗರಿ ಜನ ಸಾಮಾನ್ಯರು ಕಸದ ಸಮಸ್ಯೆ ಎದುರಿಸುವಂತಾಗಿದೆ.
ಕುವೆಂಪುನಗರದ ಪಡುವಣ ರಸ್ತೆಯ ತಿರುವು ಸೇರಿದಂತೆ ಬಹುತೇಕ ಕಡೆ ಕಸದ ರಾಶಿ ಬಿದ್ದಿದೆ. ಆದರೆ ಇದನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು, ನಗರಪಾಲಿಕೆ ಸದಸ್ಯರು ‘ವಾರ್ಡ್ ವ್ಯಾಪ್ತಿಯ’ ನೆಪ ಹೇಳುತ್ತಿದ್ದಾರೆ.
ವಾರ್ಡ್ ಸಂಖ್ಯೆ 58 ಹಾಗೂ 45ರ ಗೊಂದಲ ಈ ಭಾಗವನ್ನು ಅಶುಚಿತ್ವಕ್ಕೆ ತಳ್ಳಿದೆ. ಈ ಕುರಿತು ವಾರ್ಡ್ ನಂಬರ್ 58ರ ಪಾಲಿಕೆ ಸದಸ್ಯ ಶರತ್ ಅವರನ್ನು ಪ್ರಶ್ನಿಸಿದರೆ ಆ ಭಾಗ 45ನೇ ವಾರ್ಡ್ ವ್ಯಾಪ್ತಿಗೆ ಬರುತ್ತದೆ ಎಂದು ಸಬೂಬು ಹೇಳುತ್ತಾರೆ. 45ನೇ ವಾರ್ಡ್ ಸದಸ್ಯೆ ನಿರ್ಮಲ ಹರೀಶ್ ಅವರನ್ನು ಪ್ರಶ್ನಿಸಿದರೆ ‘ನೀವು ನಮಗೆ ವೋಟ್ ಹಾಕಿದ್ದೀರಾ? ಅದು ನನ್ನ ವ್ಯಾಪ್ತಿಗೆ ಬರುವುದಿಲ್ಲ” ಎಂದು ನೆಪ ಹೇಳುತ್ತಾರೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಇದು 45ನೇ ವಾರ್ಡ್ ವ್ಯಾಪ್ತಿಗೆ ಸೇರುತ್ತದೆ ಎಂದು ಸ್ಪಷ್ಟಪಡಿಸುತ್ತಾರೆ. ಆದರೆ ಸ್ಥಳೀಯರು ನಾವು ಮತ ಚಲಾಯಿಸಿದ್ದು 58ನೇ ವಾರ್ಡ್ ಸದಸ್ಯರಿಗಲ್ಲವೇ? ಎಂದು ಪ್ರಶ್ನಿಸಿದರೆ ಅಧಿಕಾರಿಗಳ ಬಳಿ ಇದಕ್ಕೆ ಯಾವುದೇ ಸ್ಪಷ್ಟ ಉತ್ತರವಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ಇಕ್ಕೆಲಗಳಲ್ಲಿ ಕಸದ ರಾಶಿ ಬಿದ್ದಿದ್ದು, ಕಸ ಸಾಗಿಸುವ ವಾಹನ ಇದೇ ರಸ್ತೆಯಲ್ಲಿ ತೆರಳಿದರೂ ಇತ್ತ ಗಮನ ಹರಿಸುತ್ತಿಲ್ಲ. ಕಸದ ರಾಸಿಯಿಂದ ಸ್ಥಳೀಯರಿಗೆ ಕಿರಿಕಿರಿಯಾಗುತ್ತಿದ್ದು, ಸ್ವಚ್ಚ ಮಾಡಿಸಲು ಗಡಿ ಸಮಸ್ಯೆ ನೆಪ ಹೇಳುತ್ತಿರೊ ಪಾಲಿಕೆ ಸದಸ್ಯರ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಇಲ್ಲಿನ ಸಮಸ್ಯೆ ಮಾತ್ರವಲ್ಲ, ಕಳೆದ ನಗರ ಪಾಲಿಕೆ ಚುನಾವಣೆ ಬಳಿಕ ವಾರ್ಡ್ ವಿಂಗಡಣೆಯಾದ ಬಳಿಕ ನಗರದ ಹಲವಾರು ಬಡಾವಣೆಗಳನ್ನು ಈ ಸಮಸ್ಯೆಗೆ ದೂಡಿದೆ.