ಬೆಂಗಳೂರು,ಆ,14,2020(www.justkannada.in): ನಾಳೆ ಮೈಸೂರು ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ಸಭೆ ಕರೆಯಲಾಗಿದ್ದು, ಕೊರೋನಾ ಸಂಬಂಧ ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಬೆಂಗಳೂರಿನಲ್ಲಿ ಈಗಾಗಲೇ ಕೋವಿಡ್ 19 ನಿಯಂತ್ರಣ ಸಂಬಂಧ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಗಳ ಸಹಕಾರವನ್ನೂ ಪಡೆದು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿರುವುದರಿಂದ ಸಾವಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ಶನಿವಾರ ಮೈಸೂರು ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ಸಭೆ ಕರೆಯಲಾಗಿದ್ದು, ಅಲ್ಲಿ ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಕೋವಿಡ್- ಪ್ರವಾಹ ಹಿನ್ನೆಲೆ ದಸರಾ ಸಿದ್ಧತೆ ಬಗ್ಗೆ ನೋಡಲಾಗಿಲ್ಲ…
ಮೈಸೂರು ದಸರಾ ಸಿದ್ಧತೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಸದ್ಯ ಕೋವಿಡ್ ಹಾಗೂ ಮಳೆ ಪ್ರವಾಹದ ಸಂದರ್ಭದಲ್ಲಿ ಇದರ ರಕ್ಷಣೆ ಕಾರ್ಯ ಭರದಿಂದ ಸಾಗಿದೆ. ಸಾವು-ನೋವಿನ ಸಂಖ್ಯೆಗಳು ಹೆಚ್ಚುತ್ತಿರುವುದರಿಂದ ಇವುಗಳ ಬಗ್ಗೆಯೇ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ. ಹಾಗಾಗಿ ಇನ್ನೂ ದಸರಾ ಸಿದ್ಧತೆ ಬಗ್ಗೆ ಚಿಂತನೆ ನಡೆಸಿಲ್ಲ. ಮುಂದಿನ ವಾರ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು.
ಗಲಭೆ ಪ್ರಕರಣ: ಆಸ್ತಿ-ಪಾಸ್ತಿ ಹಾನಿ ಮಾಡಿದವರ ಆಸ್ತಿ ಮುಟ್ಟುಗೋಲಿಗೆ ಸರ್ಕಾರ ಚಿಂತನೆ…
ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಯಾರು ಆಸ್ತಿ-ಪಾಸ್ತಿ ಹಾನಿ ಮಾಡಿದ್ದಾರೆಯೋ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಈಗಾಗಲೇ ಚಿಂತನೆ ನಡೆದಿದೆ. ಸರ್ಕಾರ ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ಕ್ರಮವಹಿಸಲಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
Key words: Mysore-covid- meeting –tomorrow-Minister- ST Somashekhar – preparation -Dasara.