ಮೈಸೂರು,ಏಪ್ರಿಲ್,8,2024 (www.justkannada.in): ಬಿಜೆಪಿಯಲ್ಲಿ ಒಕ್ಕಲಿಗರಿಗೆ ಅನ್ಯಾಯವಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದ ಪ್ರಶ್ನೆಗೆ ಮಾಜಿ ಸಚಿವ ಸಿ.ಟಿ.ರವಿ ಉತ್ತರಿಸದೆ ಹೊರ ನಡೆದ ಘಟನೆ ನಡೆಯಿತು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಸಿ.ಟಿ ರವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ಒಕ್ಕಲಿಗರಿಗೆ ಬಿಜೆಪಿಯಲ್ಲಿ ಅನ್ಯಾಯ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ಕೊಡಲಾಗದೆ ಸಿ.ಟಿ.ರವಿ ತಬ್ಬಿಬ್ಬಾದರು. ರಾಷ್ಟ್ರವಾದ ನಂಬಿ ಬಿಜೆಪಿಯಲ್ಲಿರುವ ಒಕ್ಕಲಿಗರು ಮತ ಹಾಕ್ತಾರೆ ಎಂದು ಸಿ.ಟಿ.ರವಿ ಉತ್ತರ ಕೊಟ್ಟರು.
ಚುನಾವಣೆ ವೇಳೆ ಮಾತ್ರ ಒಕ್ಕಲಿಗರು ರಾಷ್ಟ್ರವಾದಿಗಳಾಗ್ತಾರಾ ಎಂಬ ಪ್ರಶ್ನೆಗೆ ಸಿ.ಟಿ.ರವಿ ಉತ್ತರಿಸಲಾಗದೆ ತಡಬಡಾಯಿಸಿದರು. ಬಿಜೆಪಿಯಲ್ಲಿ ಸಿ.ಟಿ.ರವಿ, ಪ್ರತಾಪಸಿಂಹ, ಸದಾನಂದಗೌಡರಿಗೆ ಅನ್ಯಾಯವಾಗಿದೆ ಎಂಬ ವಿಚಾರ, ಇದರಿಂದ ಬೇಸತ್ತು ಒಕ್ಕಲಿಗರು ಕಾಂಗ್ರೆಸ್ ಕೈ ಹಿಡಿತಾರೆ, ಮೈಸೂರು- ಕೊಡಗು ಕ್ಷೇತ್ರದಲ್ಲಿ ಪ್ರತಾಪಸಿಂಹಗೆ ಟಿಕೆಟ್ ತಪ್ಪಿಸಿದ್ದು, ಕಾಂಗ್ರೆಸ್ ಪಕ್ಷದಿಂದ ಲಕ್ಷ್ಮಣ್ ಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಒಕ್ಕಲಿಗರು ಈ ಬಾರಿ ರಾಷ್ಟ್ರವಾದಕ್ಕೆ ಮಣೆ ಹಾಕ್ತಾರೆ ಎಂಬ ಉತ್ತರ ನೀಡಿದರು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಾಗಿದೆ ಸಿಟಿ ರವಿ ಹೊರ ನಡೆದರು.
ಇನ್ನು ಹಾಸನದಲ್ಲಿ ಪ್ರೀತಮ್ ಗೌಡ ಮತ್ತು ಪ್ರಜ್ವಲ್ ರೇವಣ್ಣ ನಡುವೆ ಮುನಿಸು ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಪ್ರೀತಮ್ ಗೌಡ ಹೇಳಿಕೆಯನ್ನ ನಾನು ನೋಡಿದ್ದೇನೆ. ಮೋದಿ ಪ್ರಧಾನಿ ಮಾಡಲಿಕ್ಕೆ ನಾವು ದುಡಿಯುತ್ತೇನೆ ಎಂದು ಹೇಳಿದ್ದಾರೆ. 28ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿ ಗೆಲ್ಲಿಸುವಂತಹ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. 28ಕ್ಷೇತ್ರಗಳಲ್ಲಿ ಹಾಸನ ಕೂಡ ಒಂದು. ಎನ್ ಡಿಎ ಭಾಗವಾಗಿ ಜೆಡಿಎಸ್ ಇದೆ. ಹಾಸನದಲ್ಲೂ ಕೂಡ ಎನ್ ಡಿಎ ಅಭ್ಯರ್ಥಿ ಗೆಲ್ತಾರೆ. ನೀವು ಫಲಿತಾಂಶ ಬಂದಾಗ ನೋಡಿ. ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿನಲ್ಲಿ ಬಿಜೆಪಿ ಮತಗಳು ಸಹಕಾರಿಯಾಗಿದೆ ಎಂದು ಗೊತ್ತಾಗುತ್ತೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡುವ ಮತದಾರರು ಕಾಂಗ್ರೆಸ್ ಗೆ ಮತ ನೀಡಲ್ಲ. ಮುಂದಿನ ದಿನಗಳಲ್ಲಿ ಇಬ್ಬರನ್ನು ಕೂರಿಸಿ ಮಾತನಾಡಿಸುವ ಕೆಲಸ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವಿಭಜನೆ ರೋಗ ಆವರಿಸಿದೆ. ದೇಶ ವಿಭಜಿಸುವ ರೋಗ ಕಾಂಗ್ರೆಸ್ ಗೆ ಬಹು ಹಿಂದಿನಿಂದ ಇದೆ, ಈಗಲೂ ಇದೆ. ಕಾಂಗ್ರೆಸ್ ಪ್ರಣಾಳಿಕೆ ನಾನು ನೋಡಿದ್ದೇನೆ. ಅರ್ಬನ್ ನಕ್ಸಲ್ ಸಹಾಯ ಪಡೆದು, ತಾಲಿಬಾನ್ ಪ್ರಚೋದನೆಯಿಂದ ಪ್ರಣಾಳಿಕೆ ರೂಪಿಸಿದಂತೆ ಕಾಣುತ್ತಿದೆ ಎಂದು ಸಿಟಿ ರವಿ ಕಿಡಿಕಾರಿದರು.
ಗ್ಯಾರಂಟಿ ಹೆಸರಿನಲ್ಲಿ ಮೋಸ ಮಾಡಿದ್ದಾರೆ. ಗ್ಯಾರಂಟಿ ಮೋಸದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ಇದೇ ತರಹ ಗ್ಯಾರಂಟಿಗೆ ವೋಟ್ ಹಾಕಿದ್ರೆ, ಕುಕ್ಕರ್ ಬ್ಲಾಸ್ಟ್ ಆಗುತ್ತೆ. ರಾಮೇಶ್ವರ ಕೆಫೆಯಂತ ಘಟನೆಗಳು ಮರುಕಳಿಸುತ್ತೆ ಎಂದು ಮಾಜಿ ಸಚಿವ ಸಿ.ಟಿ.ರವಿ ಎಚ್ಚರಿಕೆ ನೀಡಿದರು.
Key words: mysore, CT Ravi, vokkaliga