ಮೈಸೂರು,ಆಗಸ್ಟ್,19,2021(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿವಿಯ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಿದ್ದು, ಕೂಡಲೇ ಕುಲಪತಿಗಳು ಇದನ್ನು ರದ್ದುಪಡಿಸಿ ಪಾರದರ್ಶಕ ನೇಮಕಾತಿ ನಡೆಸುವಂತೆ ದಸಂಸ ಆಗ್ರಹಿಸಿದೆ.
ಜಲದರ್ಶಿನಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಸದಾ ಒಂದಿಲ್ಲೊಂದು ವಿವಾದವನ್ನೇ ಹಾಸಿ ಹೊದ್ದು ಮಲಗಿರುವ ಮುಕ್ತ ವಿಶ್ವವಿದ್ಯಾನಿಲಯವು ಮತ್ತೊಂದು ವಿವಾದವನ್ನು ಎಳೆದುಕೊಂಡಿದೆ. ಆದೇಶ ಸಂಖ್ಯೆ, ಕ.ರಾ.ಮು.ವಿ (ಆವಿ/ಸಿಬ್ಬಂದಿ-1/10/2021-22 ದಿನಾಂಕ: 28.17.2021ರನ್ವಯ ವಿವಿಧ ವಿಷಯಗಳಿಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯು ತರಾತುರಿ, ಕಾನೂನು ಬಾಹಿರ ಹಾಗೂ ಗೊಂದಲಮಯದಿಂದ ಕೂಡಿದೆ. ಈ ನೇಮಕಾತಿಯು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಹಾಗೂ ಹುದ್ದೆಯ ಆಕಾಂಕ್ಷಿಗಳ ಆಕ್ರೋಶಕ್ಕೂ ಸಹ ಕಾರಣವಾಗಿದೆ ಎಂದು ದೂರಿದರು.
28,07.2021ರನ್ವಯ ಸಾರ್ವಜನಿಕವಾಗಿ ಆರು ದಿನಗಳ ನಂತರ ಕೇವಲ ಒಂದು ಸ್ಥಳೀಯ ಪತ್ರಿಕೆಯಲ್ಲಿ ಮಾತ್ರ ಪ್ರಕಟಗೊಂಡಿದೆ. ನಿಯಮಾವಳಿ ಸಾರ ಅಧಿಸೂಚನೆಯ ಪ್ರಕಟಣೆಯು ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಪ್ರಕಟವಾಗಬೇಕಿತ್ತು. ಆದರೆ ವಿಶ್ವವಿದ್ಯಾನಿಲಯದ ಆಡಳಿತ ವರ್ಗವು ಹುದ್ದೆ ಆಕಾಂಕ್ಷಿಗಳನ್ನು ಉದ್ದೇಶ ಪೂರ್ವಕವಾಗಿಯೇ ವಂಚಿಸಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ಹೇಳಿದರು.
ಸಂಖ್ಯೆ ಕ.ರಾ.ಮು.ವಿ/ಆವಿ/ಸಿಬ್ಬಂದಿ-1/100/2001-22. ದಿನಾಂಕ 28.07.2021ರನ್ವಯ ಹೊರಡಿಸಲಾದ ಅಧಿಸೂಚನೆಯಲ್ಲಿ ಹುದ್ದೆಗಳ ಸಂಖ್ಯೆ, ಹುದ್ದೆಯ ಅವಧಿ, ವೇತನ, ಮೀಸಲಾತಿ ಅನುಸಾರ ಸವಿವರವಾಗಿ ಪ್ರಕಟಿಸದೆ ಇರುವುದು ನೇಮಕಾತಿ ವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ವಿಶ್ವವಿದ್ಯಾನಿಲಯದ ಅಂತರ್ಜಾಲದಲ್ಲಿಯೂ ಯಾವುದೇ ಮಾಹಿತಿ ಇಲ್ಲದಿರುವುದು ಕಂಡುಬಂದಿದೆ.
ಸಂದರ್ಶನದ ದಿನಾಂಕವನ್ನು 11.08.2021 ರಿಂದ 14.08.2021ರ ವರೆಗೆ ನಡೆಸಿದ್ದು, ಬಹಳ ಮುಖ್ಯವಾಗಿ ಕರ್ನಾಟಕ ರಾಜ್ಯ ಸರಕಾರದ ಕೋವಿಡ್ ನಿಯಮಗಳ ಪಾಲನೆ ಅನುಸಾರ (14,08,2021ರ ಶನಿವಾರ ವಾರಾಂತ್ಯ ಕರ್ಫ್ಯೂ ಇದ್ದಾಗಿಯೂ ಸಹ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆಯನ್ನು ಗಾಳಿಗೆ ತೂರಿ ಸಂದರ್ಶನವನ್ನು ನಡೆಸಲು ಮುಂದಾಗಿದ್ದರು. ಆದರೆ, ವಿರೋಧ ವ್ಯಕ್ತವಾದ ಮೇಲೆ ದಿನಾಂಕವನ್ನು ಮುಂದೂಡಿ ಅದನ್ನು 16.18,2021ರ ಸೋಮವಾರದಂದು ಬದಲಾವಣೆ ಮಾಡಲಾಗಿದೆ. ಇದರಿಂದ ದೂರದೂರಿನಿಂದ ಬರುವ ಹುದ್ದೆ ಆಕಾಂಕ್ಷಿಗಳಿಗೆ ತೊಂದರೆ ಆಗಿ ಸಂದರ್ಶನಕ್ಕೆ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಅಧಿಸೂಚನೆಯಲ್ಲಿ ವಿದ್ಯಾರ್ಹತೆಯನ್ನು ಯುಜಿಸಿ 2018ರ ಮಾರ್ಗಸೂಚಿ ಅನುಸಾರ ನಿಗದಿಪಡಿಸಿದ್ದು, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್.ಡಿ ಪದವಿಯು ಕಡ್ಡಾಯವಾಗಿರುತ್ತದೆ. ಅಧಿಸೂಚನೆಯ ಅರ್ಜಿ ನಮೂನೆಯಲ್ಲಿ ಪಿಎಚ್.ಡಿ., ನೆಟ್, ಕೆ ಸೆಟ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೆಂದು ಮುದ್ರಿಸಿ ಸಂದರ್ಶಕರನ್ನು ದಿಕ್ಕು ತಪ್ಪಿಸಲಾಗಿದೆ ಎಂದು ದೂರಿದರು.
ಅದೇ ರೀತಿ ಯುಜಿಸಿ ನಿಯಮಾನುಸಾರ ಅವಳಿ ವಿಷಯಗಳಾದ ರಾಜ್ಯಶಾಸ ಮತ್ತು ಆಡಳಿತ ವಿಷಯವನ್ನು ವಿವಿಯ ಮಟ್ಟದಲ್ಲಿ ಬೋಧಿಸುವ ಸಂಬಂಧ ಪರಸ್ಪರ ಅಂತರ್ಗತ ವಿಷಯಗಳೆಂದು ಪರಿಗಣಿಸಿ ನೇಮಕಾತಿ ಸಂದರ್ಭದಲ್ಲಿ ಅವಕಾಶ ನೀಡಬೇಕೆಂದು ತಿಳಿಸಿದ್ದರೂ ನಿಯಮವನ್ನು ಗಾಳಿಗೆ ತೂರಿ ಈ ಸಂಬಂಧ ಯಾವುದೇ ತಜ್ಞರ ಅಭಿಪ್ರಾಯ ಪಡೆಯದೆ ಕೇವಲ ಸಾರ್ವಜನಿಕ ವಿಭಾಗದ ಅಧ್ಯಕ್ಷರಾದ ಡಾ.ಜಗದೀಶ ಬಾಬು ಅವರ ಅಭಿಪ್ರಾಯವನ್ನೇ ತಜ್ಞರ ಅಭಿಪ್ರಾಯವೆಂದು ಪರಿಗಣಿಸಿ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆಡಳಿತ ವಿಷಯವನ್ನು ಅಧ್ಯಯನ ಮಾಡಿದವರು ಮಾತ್ರ ಸಂದರ್ಶನಕ್ಕೆ ಅರ್ಹರೆಂದು ತಿಳಿಸಿರುತ್ತಾರೆ. ಹಾಗೇ ನೋಡಿದರೆ ಡಾ.ಜಗದೀಶ್ ಬಾಬುರವರೇ ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಅಭಿಯನ ವಿಭಾಗದಲ್ಲಿ ಪಿಎಚ್.ಡಿ ಪದವಿ ಪ್ರಸ್ತುತ ಸಾರ್ವಜನಿಕ ಆಡಳಿತ ವಿಷಯಕ್ಕೆ ಮಾರ್ಗದರ್ಶರಾಗಲು ಹೊರಟಿರುವುದು ಎದ್ದು ಸಮಂಜಸವಾದುದೆ ಎಂದು ಚೋರನಹಳ್ಳಿ ಶಿವಣ್ಣ ಪ್ರಶ್ನಿಸಿದ್ದಾರೆ.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕೆ.ವಿ,ದೇವೇಂದ್ರ, ಯಡದೊರೆ ಮಹದೇವಯ್ಯ, ನಟರಾಜು ಹಾರೋಹಳ್ಳಿ, ಸೋಮಣ್ಣ ಬನ್ನಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Key words: mysore-Dasamsa- demands -cancellation – appointment -temporary -assistant professor- Recruitment