ಮೈಸೂರು,ಸೆಪ್ಟಂಬರ್,30,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 7ರಂದು ಆರಂಭಗೊಳ್ಳುವ ಮೈಸೂರು ದಸರಾ ಅಕ್ಟೋಬರ್ 15ರ ಜಂಬೂ ಸವಾರಿ ಮೆರವಣಿಗೆ ಮೂಲಕ ಮುಕ್ತಾಯಗೊಳ್ಳಲಿದೆ.
ಈ ನಡುವೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ನಿತ್ಯ ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಗುತ್ತಿದೆ. ಅಂತೆಯೇ ಇಂದು ಅರಮನೆ ಕೋಟೆ ಮಾರಮ್ಮ ದೇವಾಲಯದ ಆವರಣದಲ್ಲಿ ಗಜಪಡೆ ಹಾಗೂ ಅಶ್ವಪಡೆ ಬೆದರದಂತೆ ಕುಶಾಲತೋಪು ತಾಲೀಮು ನಡೆಸಲಾಯಿತು.
ಡಿಸಿಎಫ್ ಕರಿಕಾಳನ್, ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ನೇತೃತ್ವದಲ್ಲಿ 21 ಸುತ್ತು ಸಿಡಿಮದ್ದು ಸಿಡಿಸಿ ಆನೆಗಳು ಹಾಗೂ ಕುದುರೆಗಳಿಗೆ ಕುಶಾಲತೋಪು ತಾಲೀಮು ನಡೆಸಲಾಯಿತು. ಈ ವೇಳೆ 7 ಫಿರಂಗಿ ಗಾಡಿಗಳಿಂದ ಸಶಸ್ತ್ರ ಮೀಸಲು ಪಡೆ 21 ಸುತ್ತು ಸಿಡಿಮದ್ದು ಸಿಡಿಸಿತು.
ಫಿರಂಗಿ ಸದ್ದಿಗೆ ಗಜಪಡೆ ಹಾಗೂ ಅಶ್ವದಳ ಬೆಚ್ಚಿದವು. ಮೊದಲ ಬಾರಿ ಆಗಮಿಸಿದ ಅಶ್ವತ್ಥಾಮ ಆನೆಗೂ ಫಿರಂಗಿ ಭಯ ಮೂಡಿದ್ದು, ಇನ್ನೊಂದೆಡೆ ಫಿರಂಗಿ ಭಯಕ್ಕೆ ಗೋಪಾಲಸ್ವಾಮಿ ಆನೆ ಕೂಗು ಹಾಕಿದ ದೃಶ್ಯ ಕಂಡು ಬಂದಿತು. ಲಕ್ಷ್ಮಿ ಹಾಗೂ ಧನಂಜಯ ಆನೆಗಳು ಕೂಡ ಫಿರಂಗಿ ಸದ್ದಿಗೆ ಬೆದರಿ ಓಡಾಡಿದವು.
Key words: mysore dasara- Artillery-work out-gajapade-ashwadala