ಮೈಸೂರು,ಸೆ,13,2019(www.justkannada.in): ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು ಈ ನಡುವೆ ಇಂದು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಇಂದು ಮೊದಲ ಹಂತದಲ್ಲಿ ಫಿರಂಗಿ ತಾಲೀಮು ನಡೆಸಲಾಯಿತು.
ಮೈಸೂರು ಅಂಬಾ ವಿಲಾಸ ಅರಮನೆಯ ಕೋಟೆ ಮಾರಮ್ಮ ದೇವಸ್ಥಾನದ ಬಳಿ ಫಿರಂಗಿ ತಾಲೀಮು ನಡೆಸಲಾಯಿತು. ನಗರ ಶಸ್ತ್ರಾಸ್ತ್ರ ಮೀಸಲು ಪಡೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ನೇತೃತ್ವದಲ್ಲಿ ತಾಲೀಮು ನಡೆಯಿತು. ಫಿರಂಗಿ ತಾಲೀಮಿನಲ್ಲಿ ಗಜಪಡೆಯ 11 ಆನೆಗಳು ಮತ್ತು 25 ಕುದುರೆಗಳು ಭಾಗಿಯಾಗಿದ್ದವು.
ರಾಜ್ಯ ಎಡಿಜಿಪಿ ಹಿರಿಯ ಪೊಲೀಸ್ ಅಧಿಕಾರಿ ಅಮರ್ ಕುಮಾರ್ ಪಾಂಡೆ ಹಾಗೂ ಮೈಸೂರು ನಗರ ಪೊಲೀಸ್ ಕಮಿಷನರ್ ಟಿ. ಬಾಲಕೃಷ್ಣ ನೇತೃತ್ವದಲ್ಲಿ ಫಿರಂಗಿ ತಾಲೀಮು ನಡೆಯಿತು. ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಹಾಗೂ ಕುದುರೆಗಳಿಗೆ ಭಾರಿ ಶಬ್ದದ ಪರಿಚಯ ಮಾಡುವ ಉದ್ದೇಶದಿಂದ ಈ ತಾಲೀಮು ನಡೆಸಲಾಗುತ್ತದೆ.
ಇಂದು ನಗರ ಸಶಸ್ತ್ರ ಮೀಸಲು ಪಡೆಯ 30 ಸಿಬ್ಬಂದಿಗಳು7 ಗಾಡಿಗಳ ಮೂಲಕ 21 ಸುತ್ತುಗಳಲ್ಲಿ ಒಟ್ಟು 21 ಕುಶಾಲತೋಪು ಸಿಡುವ ಪೂರ್ವಾಭ್ಯಾಸ ನಡೆಸಿದರು. ಫಿರಂಗಿ ತಾಲೀಮಿನ ವೇಳೇ ಬೆದರುವ ಲಕ್ಷಣಗಳಿರುವ ಈಶ್ವರ, ಜಯಪ್ರಕಾಶ್, ಲಕ್ಷ್ಮೀ ಮತ್ತು ಈಗಾಗಲೇ ದಸರಾದಲ್ಲಿ ಭಾಗಿಯಾಗಿರುವ ಧನಂಜಯ, ದುರ್ಗಾಪರಮೇಶ್ವರಿ ಆನೆಗಳ ಕಾಲಿಗೆ ಸರಪಣಿ ಕಟ್ಟಿ ಮುಂಜಾಗ್ರತಾ ಕ್ರಮ ವಹಿಸಲಾಗಿತ್ತು. ಗರ್ಭಿಣಿಯಾಗಿರುವ ಆನೆ ವರಲಕ್ಷ್ಮೀ ಸಿಡಿಮದ್ದು ತಾಲೀಮಿಗೆ ಗೈರುಗಿತ್ತು. ಹಾಗೆಯೇ ಆಪರೇಷನ್ ಕಿಂಗ್ ಅಭಿಮಾನ್ಯು ಗುಂಡ್ಲುಪೇಟೆ ತಾ. ಚೌಡಹಳ್ಳಿ ಗ್ರಾಮದಲ್ಲಿ ಹುಲಿ ಸೆರೆ ಕಾರ್ಯಚರಣೆಗೆ ಭಾಗಿಯಾಗಿದ್ದು ಈ ಹಿನ್ನೆಲೆ ತಾಲೀಮಿನಲ್ಲಿ ಗೈರಾಗಿದೆ.
Key words: Mysore Dasara -Artillery workout- elephant-horses