ಮೈಸೂರು,ಅಕ್ಟೋಬರ್,7,2020(www.justkannada.in): ಕೊರೋನಾ ಹಿನ್ನೆಲೆ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಸರಳ ಸಾಂಪ್ರದಾಯಕವಾಗಿ ಸರ್ಕಾರ ಆಚರಿಸಲು ಮುಂದಾಗಿದ್ದು, ಆದರೂ ಸಹ ಜಂಬೂ ಸವಾರಿ ವೇಳೆ ಎರಡು ಸಾವಿರ ಜನರಿಗೆ ಅವಕಾಶ ನೀಡಲು ಚಿಂತನೆ ನಡೆಸಿದೆ.
ಈ ಮಧ್ಯೆ ದಸರಾ ಆಚರಣೆಯಿಂದ ಅನಾಹುತ ಉಂಟಾದರೆ ನಿಮ್ಮ ಮೇಲೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುತ್ತೇವೆ ಎಂದು ಸರ್ಕಾರಕ್ಕೆ ಮೈಸೂರು ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನುಮೋಹನ್ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸಿಎಂಗೆ ಪತ್ರ ಬರೆದಿರುವ ಭಾನುಮೋಹನ್, ನಾಡಹಬ್ಬ ದಸರಾ ಅರಮನೆಯವರಿಗೆ ಸೀಮಿತವಾಗಿರಲಿ. ಇದರಲ್ಲಿ ಸರ್ಕಾರ ಮೂಗು ತೂರಿಸುವುದು ಸರಿಯಲ್ಲ. ದಸರಾ ಆಚರಣೆಯಿಂದ ಅನಾಹುತ ಉಂಟಾದರೆ ನಿಮ್ಮ ಮೇಲೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ರಣಕೇಕೆ ಹಾಕುತ್ತಿದೆ. ನಾಡಹಬ್ಬ ದಸರಾವನ್ನು ಅರಮನೆಯವರೇ ಸಾಂಪ್ರದಾಯಿಕವಾಗಿ ಆಚರಿಸಿಕೊಳ್ಳಲಿ. ಸದ್ಯ ಈ ಆಚರಣೆಗೆ ಯಾವ ಸಚಿವರು ಹಾಗೂ ಸಾರ್ವಜನಿಕರು ಆಗಮಿಸುವುದು ಬೇಡ. ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಜನ ಸೇರಿಸಿ ದಸರಾ ಆಚರಣೆ ಮಾಡುವುದು ಸೂಕ್ತವಲ್ಲ ಎಂದು ಭಾನುಮೋಹನ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಹಾಗೆಯೇ ಒಂದು ವೇಳೆ ಸರ್ಕಾರ ತಮ್ಮ ನಿಲುವಿಗೆ ಬದ್ಧವಾಗಿ ಜನರನ್ನು ಸೇರಿಸಿ ಆಚರಣೆ ಮಾಡಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಜವಾಬ್ದಾರರಾಗಬೇಕಾಗುತ್ತದೆ. ದಸರಾ ಆಚರಣೆ ವೇಳೆ ತೊಂದರೆ ಉಂಟಾದರೇ ಈ ಬಗ್ಗೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುವುದಾಗಿ ಭಾನುಮೋಹನ್ ಎಚ್ಚರಿಕೆ ನೀಡಿದ್ದಾರೆ.
Key words: mysore-dasara- case- Warning- CM- letter – Environmental Protection Committee