ಮೈಸೂರು,ಅಕ್ಟೋಬರ್,7,2020(www.justkannada.in): ದಸರಾವನ್ನು ಹೇಗೆ ಆಚರಿಸಬೇಕು ಎಂಬುದು ನನ್ನೊಬ್ಬನ ನಿರ್ಧಾರವಲ್ಲ. ಇದಕ್ಕೆಂದು ಹೈಪವರ್ ಕಮಿಟಿ ಇದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿರುವ ಹೈಪವರ್ ಕಮಿಟಿಯಲ್ಲಿ ಒಂದು ಒಮ್ಮತದ ನಿರ್ಧಾರಕ್ಕೆ ಬಂದು ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ. ಆ ಬಳಿಕ ನಿರ್ಧಾರವನ್ನು ಹೇಳಲಾಗುತ್ತದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಮೈಸೂರು ದಸರಾ ಆಚರಣೆ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಇಲ್ಲಿ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲಾಗದು. 27 ಕ್ಕೂ ಹೆಚ್ಚು ಮಂದಿ ಕಮಿಟಿಯಲ್ಲಿರುತ್ತಾರೆ. ಇಲ್ಲಿ ತೆಗೆದುಕೊಳ್ಳಲಾಗುವ ತೀರ್ಮಾನವನ್ನು ಅನುಷ್ಠಾನ ಮಾಡುವ ಹೊಣೆ ಇಲ್ಲಿನ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವನಾಗಿ ನನ್ನದಾಗಿರುತ್ತದೆ. ಇಲ್ಲಿ ಯಾವುದೇ ಗೊಂದಲವನ್ನು ಮಾಡಿಕೊಳ್ಳುವುದು ಬೇಡ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಪಕ್ಷದ ನಾಯಕರಾದ ವಿಶ್ವನಾಥ್ ಸೇರಿದಂತೆ ಎಲ್ಲರೂ ಅವರವರ ಅಭಿಪ್ರಾಯಗಳನ್ನು ತಿಳಿಸಬಹುದು. ಒಳ್ಳೆಯದಿದ್ದರೆ ನಾನು ಅದನ್ನು ಸ್ವಾಗತಿಸುತ್ತೇನೆ. ಅಂತಿಮವಾಗಿ ಎಲ್ಲ ತೀರ್ಮಾನವನ್ನು ಹೈಪವರ್ ಕಮಿಟಿ ತೆಗೆದುಕೊಳ್ಳುತ್ತದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದರು.
Key words: mysore-dasara-celbration -not my –decision-Minister -ST Somashekhar ..