ಮೈಸೂರು,ಆ,28,2020(www.justkannada.in): ಕೊರೋನಾ ಹಿನ್ನೆಲೆ ಈ ಬಾರಿ ಸರಳ ಮತ್ತು ಸಂಪ್ರದಾಯವಾಗಿ ದಸರಾ ಆಚರಣೆ ಮಾಡುವುದಾಗಿ ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಮೈಸೂರು ದಸರಾ ಆಚರಣೆಯೇ ಬೇಡ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಡಗಲಪುರ ನಾಗೇಂದ್ರ, ರಾಜ್ಯದಲ್ಲಿ ದಿನೇದಿನೇ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಜತೆಗೆ ಹಲವೆಡೆ ಪ್ರವಾಹದಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ದಸರಾ ಆಚರಣೆ ಮಾಡಿದ್ರೆ ಕೊರೋನಾ ಮತ್ತಷ್ಟು ಹೆಚ್ಚುತ್ತದೆ. ಬ್ಯುಸಿನೆಸ್ ಗೋಸ್ಕರ ದಸರಾ ಮಾಡಬಾರದು. ಸರಳವಾಗಲಿ, ಅದ್ದೂರಿಯಾಗಲಿ ಯಾವುದೇ ರೀತಿಯ ದಸರಾ ಆಚರಣೆ ಬೇಡ ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಇದೆ, ಖಜಾನೆ ಖಾಲಿಯಾಗಿದೆ. ಸಾಲ ಮಾಡಿಯಾದರೂ ಪ್ರವಾಹ ಪರಿಹಾರ ನೀಡುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ಹೇಳುತ್ತಾರೆ. ಆಗಿದ್ದ ಮೇಲೆ ದಸರಾ ಆಚರಣೆ ಮಾಡಿದರೂ ಸಾಲ ಮಾಡಬೇಕಾಗುತ್ತದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಹಣ ಪೋಲು ಮಾಡುವುದು ಬೇಡ. ಜನರು ಮನೆ ಮನೆಯಲ್ಲಿ ಹಬ್ಬ ಆಚರಿಸಿಕೊಳ್ಳಲಿ ಎಂದು ಬಡಗಲಪುರ ನಾಗೇಂದ್ರ ಸಲಹೆ ನೀಡಿದರು.
ಹೆಚ್.ಡಿ.ಕೋಟೆ ಭಾಗದಲ್ಲಿ ಹತ್ತಿ ಫಸಲು ನೆಲಕಚ್ಚುತ್ತಿದೆ. ರೈತರಿಗೆ ವಿತರಿಸಿದ್ದ ಬಿತ್ತನೆ ಬೀಜಗಳು ಕಾಯಿ ಕಚ್ಚುತ್ತಿಲ್ಲ. ಈ ಬಗ್ಗೆ ಸರ್ಕಾರ ಸಮೀಕ್ಷೆ ನಡೆಸಬೇಕು ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಮೈಸೂರು ಹಾಗೂ ಚಾಮರಾಜನಗರ ಭಾಗದಲ್ಲಿ ಆನೆ ಹಾಗೂ ಹುಲಿ ದಾಳಿ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಗಮನಹರಿಸುವಂತೆ ರೈತಸಂಘದ ವತಿಯಿಂದ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
Key words: Mysore dasara-Celebration- Farmer leader -Badagalapura Nagendra