ಮೈಸೂರು,ಅಕ್ಟೋಬರ್,16,2020(www.justkannada.in): ರಾಜ್ಯದಲ್ಲಿ ನೆರೆ ವಿಚಾರ ಸಂಬಂಧ ನಾನು ಎರಡು ಮೂರು ದಿನ ಉತ್ತರ ಕರ್ನಾಟಕ ಪ್ರವಾಸ ಮಾಡುತ್ತೇನೆ. ಈಗಾಗಲೇ ಅಲ್ಲಿನ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮಾಹಿತಿ ಪಡೆದಿದ್ದೇನೆ. ನೆರೆ ಸಂತ್ರಸ್ತರ ಜೊತೆ ನಾವಿದ್ದೇವೆ: ಸರಕಾರದಲ್ಲಿ ಹಣದ ಕೊರತೆ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.
ನಾಳೆ ದಸರಾ ಉದ್ಘಾಟನೆ ಹಿನ್ನೆಲೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಂದು ಮೈಸೂರಿಗೆ ಆಗಮಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ರಾಜ್ಯದಲ್ಲಿ ನೆರೆ ವಿಚಾರ ಸಂಬಂಧ ನಾನು ಎರಡು ಮೂರು ದಿನ ಉತ್ತರ ಕರ್ನಾಟಕ ಪ್ರವಾಸ ಮಾಡುತ್ತೇನೆ. ಈಗಾಗಲೇ ಅಲ್ಲಿನ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮಾಹಿತಿ ಪಡೆದಿದ್ದೇನೆ. ನಮ್ಮ ಸಚಿವರು ಕೆಲವರು ಹೋಗಿದ್ದಾರೆ, ಇನ್ನು ಕೆಲವರು ಹೋಗುತ್ತಾರೆ. ಡಿಸಿಎಂ ಕಾರಜೋಳ ಬೇರೆ ಕಾರ್ಯದಲ್ಲಿ ಇದ್ದರು. ಈಗ ಅವರು ಹೋಗುತ್ತಾರೆ. ಜನರ ಜೊತೆ ಸರ್ಕಾರ ಇದೆ. ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುತ್ತೇವೆ. ಸರಕಾರದಲ್ಲಿ ಹಣದ ಕೊರತೆ ಇಲ್ಲ,ನೆರೆ ಸಂತ್ರಸ್ತರ ಜೊತೆ ನಾವಿದ್ದೇವೆ ಎಂದರು.
5-6ಜಿಲ್ಲೆಗಳಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಪ್ರವಾಹ ಆಗಿದೆ. ಸಾವಿರಾರು ಮನೆಗಳು, ಅಪಾರ ಪ್ರಮಾಣದ ಬೆಳೆ ಹಾನಿ ಆಗಿದೆ. ಎಲ್ಲಾ ಡಿಸಿಗಳ ಹತ್ತಿರ ಹಣ ಇದೆ.ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸುತ್ತೇವೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಮಾತನಾಡಿದ್ದೇನೆ. ಅವರೂ ನೆರವು ನೀಡುವುದಾಗಿ ಹೇಳಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡುತ್ತೇವೆ ಎಂದು ತಿಳಿಸಿದರು.
ಪ್ರವಾಹ ವೀಕ್ಷಣೆ ಪ್ರವಾಸ ಮಾಡುವ ಬಗ್ಗೆ ನಾಳೆ ಅಥವಾ ನಾಳಿದ್ದು ತೀರ್ಮಾನ ಮಾಡುತ್ತೇನೆ. ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಹೋಗಿದ್ದಾರೆ. ಕಂದಾಯ ಸಚಿವರು ಹೋದರೆ ಎಲ್ಲರೂ ಹೋದಂತೆ. ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳುತ್ತೇವೆ. ರೈತ ಸಮುದಾಯಕ್ಕೂ ನಮ್ಮ ಮೇಲೆ ವಿಶ್ವಾಸವಿದೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ನೀಡಿ ಮನೆ ಕಟ್ಟಿಸಿ ಕೊಡುತ್ತೇವೆ. ತಕ್ಷಣವೇ 10 ಸಾವಿರ ರೂ. ತಾತ್ಕಾಲಿಕ ಪರಿಹಾರ ಕೊಡುತ್ತೇವೆ. ಎನ್ಡಿಆರ್ಎಫ್ನಿಂದ ಕಡಿಮೆ ಹಣ ಬಂದರೂ ನಾವು ಮತ್ತಷ್ಟು ಹಣ ಹಾಕಿ ಮನೆ ಕಟ್ಟಿಸಿಕೊಡುತ್ತೇವೆ ಎಂದು ಸಿಎಂ ಬಿಎಸ್ ವೈ ಭರವಸೆ ನೀಡಿದರು.
ಪ್ರವಾಹ ನಷ್ಟದ ಅಂದಾಜು ಆಗಿಲ್ಲ. ಒಂದು ವಾರ ಬೇಕು ಅಂತ ಜಿಲ್ಲಾಧಿಕಾರಿಗಳು ಕೇಳಿದ್ದಾರೆ. ಸಮಗ್ರ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ಬಿಎಸ್ ವೈ ತಿಳಿಸಿದರು.
key words: mysore-dasara- cm- bs yeddyurappa- flood