ಮೈಸೂರು,ಅಕ್ಟೋಬರ್,17,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2020ಕ್ಕೆ ಚಾಲನೆ ದೊರೆತಿದ್ದು, ಇಂದಿನಿಂದ ಅರಮನೆ ಅಂಗಳದಲ್ಲಿ ಸಾಂಸ್ಕೃತಿಕ ಕಲರವ ಮೇಳೈಸಲಿದೆ.
ಕೊರೋನಾ ಆತಂಕದಿಂದಾಗಿ ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುತ್ತಿದ್ದು, ಇಂದು ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ಪ್ರತಿಭಾರಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ನೋಡಲು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಈ ಬಾರಿ ದಸರಾ ವಸ್ತು ಪ್ರದರ್ಶನ, ಆಹಾರ ಮೇಳ, ಯುವದಸರಾದಂತಹ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿದ್ದು, ಕೇವಲ ಅರಮನೆ ಅಂಗಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ.
ಮೈಸೂರಿನ ಅರಮನೆ ಅಂಗಳದಲ್ಲಿ ರಾತ್ರಿ ವೇಳೆ ಎರಡು ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲು ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಇಂದಿನಿಂದ ಎಂಟು ದಿನಗಳ ಕಾಲ ಅರಮನೆ ಅಂಗಳದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 17 ರಿಂದ 24ರವರೆಗೆ ಅರಮನೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಕಾರ್ಯಕ್ರಮಗಳಿಗೆ ಅರಮನೆ ಮುಂಭಾಗ ಭರ್ಜರಿ ವೇದಿಕೆ ಸಿದ್ಧತೆ ಮಾಡಲಾಗುತ್ತಿದೆ. ರಾಜ್ಯ ಹಾಗೂ ದೇಶದ ಪ್ರಖ್ಯಾತ ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೆರುಗು ನೀಡಲಿದ್ದಾರೆ.
ಪ್ರತಿ ದಿನ ಸಂಜೆ 7 ಗಂಟೆಯ ನಂತರ 1 ರಿಂದ 2 ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕಲಾಸಕ್ತರಿಗೆ ಭರ್ಜರಿ ರಸದೌತಣ ಸಿಗಲಿದೆ. ಇನ್ನು ಇಂದು ಶುಭ ಧನಂಜಯ ಮತ್ತು ತಂಡದವರಿಂದ ನೃತ್ಯರೂಪಕ ಕಾರ್ಯಕ್ರಮ ನಡೆಯಲಿದೆ. ಈ ಮಧ್ಯೆ ಕೋವಿಡ್ ಹಿನ್ನೆಲೆ ಕಾರ್ಯಕ್ರಮ ವೀಕ್ಷಿಸಲು ಸೀಮಿತ ಸಂಖ್ಯೆಗಷ್ಟೇ ಅವಕಾಶ ನೀಡಲಾಗಿದೆ.
Key words: Mysore: Dasara-cultural program- palace -today.