ಮೈಸೂರು,ಅಕ್ಟೋಬರ್,4,2024 (www.justkannada.in): ಈ ಹಿಂದೆ ದಸರಾ ವಸ್ತು ಪ್ರದರ್ಶನದಲ್ಲಿನ ವಿವಿಧ ಮಾರ್ಗಗಳಿಗೆ ಕೊಡಲಾಗಿದ್ದ ಸಾಹಿತಿಗಳು ಮತ್ತು ಕನ್ನಡ ಹೋರಾಟಗಾರರ ಹೆಸರುಗಳ ನಾಮಫಲಕವನ್ನ ಕಿತ್ತೆಸೆಯಲಾಗಿದ್ದು ಈ ಕೃತ್ಯಕ್ಕೆ ಮೈಸೂರು ಕನ್ನಡ ಕ್ರಿಯಾ ಸಮಿತಿ, ಪ್ರಧಾನ ಕಾರ್ಯದರ್ಶಿ ಸರ ಸುದರ್ಶನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕಿಡಿಕಾರಿರುವ ಸರ ಸುದರ್ಶನ, ಈ ಹಿಂದೆ ದಸರಾ ವಸ್ತು ಪ್ರದರ್ಶನದಲ್ಲಿನ ವಿವಿಧ ಮಾರ್ಗಗಳಿಗೆ ಕೊಡಲಾಗಿದ್ದ ಸಾಹಿತಿಗಳು ಮತ್ತು ಕನ್ನಡ ಹೋರಾಟಗಾರರ ಹೆಸರುಗಳನ್ನು ಈಗಿನ ಪ್ರಾಧಿಕಾರದ ಆಡಳಿತ ಮಂಡಳಿ ಕಿತ್ತು ಹಾಕಿರುವುದು ಖಂಡನೀಯ. ಆರ್ ರಘು ಅವರು ದಸರಾ ವಸ್ತು ಪ್ರದರ್ಶನದ ಅಧ್ಯಕ್ಷರಾಗಿದ್ದಾಗ ಆವರಣದೊಳಗಿನ ಮಾರ್ಗಗಳಿಗೆ ಈ ಹೆಸರುಗಳನ್ನು ಇಡಲಾಗಿತ್ತು.
ಕುವೆಂಪು, ಕಾರಂತ, ಬೇಂದ್ರೆ ಸೇರಿದಂತೆ 30ಕ್ಕೂ ಹೆಚ್ಚು ಹೆಸರುಗಳನ್ನು ವಸ್ತು ಪ್ರದರ್ಶನದ ಪ್ರಾಧಿಕಾರ ನೇಮಿಸಿದ್ದ ಕನ್ನಡ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿದ್ದ ಸರ ಸುದರ್ಶನ ಅವರ ನೇತೃತ್ವದ ಸಮಿತಿ ಪರಂಪರೆಯನ್ನು ಆಧರಿಸಿ ಹೆಸರುಗಳನ್ನು ಆಯ್ಕೆ ಮಾಡಿತ್ತು. ಈ ಹೆಸರುಗಳು ಶಾಶ್ವತವಾಗಿ ಇರಲೆಂದು ಆಗಿನ ಅಧ್ಯಕ್ಷ ಆರ್ ರಘು ಗಟ್ಟಿಯಾದ ಕಾಂಕ್ರೀಟ್ ಸೂಚನಾ ಫಲಕಗಳನ್ನು ಅಳವಡಿಸಿದ್ದರು.
ದುರದೃಷ್ಟವಶಾತ್ ಈಗಿನ ಅಧಿಕಾರಸ್ತರು ಅವುಗಳ ಪರಿವೆ ಇಲ್ಲದೆ ಅವುಗಳನ್ನು ಕಿತ್ತೆಸೆದು ಗುಡ್ಡೆ ಹಾಕಿ ಎಸೆದಿದ್ದಾರೆ. ಈ ಗುಡ್ಡೆ ಹಾಕಿರುವ ಫಲಕಗಳಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ, ಕನ್ನಡ ಪ್ರಜ್ಞೆಯ ನೇತಾರನಾಗಿದ್ದ ಗೋಕಾಕರ ಹೆಸರು ಎದ್ದು ಕಾಣುತ್ತಿರುವುದು ಪಾರಂಪರಿಕ ಪ್ರಜ್ಞೆಯಲ್ಲಿ ನಾವೆಷ್ಟು ಬಡವರಾಗಿದ್ದೇವೆ ಎಂಬುದನ್ನು ಸೂಚಿಸುತ್ತದೆ. ಪಾರಂಪರಿಕ ಹಬ್ಬ ದಸರೆಯಲ್ಲಿ ಈ ಕೃತ್ಯ ನಡೆದಿರುವುದು ನಿಜಕ್ಕೂ ಖಂಡನೀಯ ಎಂದು ಸರ ಸುದರ್ಶನ ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗಯೇ ಕೂಡಲೇ ಈ ನಾಮಫಲಕಗಳನ್ನು ಪುನರ್ ಸ್ಥಾಪನೆ ಮಾಡಬೇಕೆಂದು ಕನ್ನಡ ಹೋರಾಟಗಳನ್ನು ಬೆಂಬಲಿಸುತ್ತ ಬಂದಿರುವ ಅಯೂಬ್ ಖಾನ್ ಅವರನ್ನು ಕನ್ನಡ ಕ್ರಿಯಾ ಸಮಿತಿ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.
Key words: mysore Dasara exhibition, writer, nameplates, reinstatement