ಮೈಸೂರು ದಸರಾ ಆಹಾರ ಮೇಳ: ಲಾಟರಿ ಮೂಲಕ ಅಂಗಡಿ ಮಳಿಗೆಗಳಿಗೆ ಮಾರಾಟಗಾರರ ಆಯ್ಕೆಗೆ ವಿರೋಧ

ಮೈಸೂರು,ಸೆಪ್ಟಂಬರ್,18,2024 (www.justkannada.in): ಮೈಸೂರು ದಸರಾ ಮಹೋತ್ಸವಕ್ಕೆ ಲಾಟರಿ ಮೂಲಕ ಅಂಗಡಿ ಮಳಿಗೆಗಳಿಗೆ ಮಾರಾಟಗಾರರ ಆಯ್ಕೆ ಪ್ರಕ್ರಿಯೆ ನಡೆಸುವುದಕ್ಕೆ ಮೈಸೂರು ದಸರಾ ಆಹಾರ ಮೇಳ ತಿಂಡಿ ತಿನಿಸು ಮಾರಾಟಗಾರರ ಸಂಘ  ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ದಸರಾ ಆಹಾರ ಮೇಳ ತಿಂಡಿ ತಿನಿಸು ಮಾರಾಟಗಾರರ ಸಂಘದ ಅಧ್ಯಕ್ಷ ನಾಗರಾಜು ಮತ್ತು ಕಾರ್ಯದರ್ಶಿ ಕಂಸಾಳೆ ರವಿ, ಈ ಬಾರಿ ದಸರಾ ಆಹಾರ ಮೇಳದಲ್ಲಿ ಲಾಟರಿ ಎತ್ತುವ ಮೂಲಕ ಅಂಗಡಿ ಮಳಿಗೆಗಳಿಗೆ ಮಾರಾಟಗಾರರ ಆಯ್ಕೆ ಪ್ರಕ್ರಿಯೆ ರದ್ದುಪಡಿಸಿ ಹಳೆಯ ಪದ್ದತಿಯನ್ನೇ ಮುಂದುವರೆಸಿ ಎಂದು ಆಗ್ರಹಿಸಿದರು.

ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಿದರೆ ಸ್ಥಳೀಯರಿಗೆ ಅವಕಾಶ ಸಿಗುವುದಿಲ್ಲ. ಜೊತೆಗೆ ಅವ್ಯವಸ್ಥೆಗೆ ಕಾರಣವಾಗುತ್ತದೆ. ಕಳೆದ ಬಾರಿಯೂ ಕೂಡ ಆನ್ ಲೈನ್ ಪದ್ದತಿಯಿಂದ ಸಾಕಷ್ಟು ಅವ್ಯವಸ್ಥೆ ಉಂಟಾಯಿತು. ಹಾಗಾಗಿ ಆನ್ ಲೈಬ್ ಮತ್ತು ಲಾಟರಿ ಸಿಸ್ಟಮ್ ಎರಡೂ ಪದ್ದತಿಯನ್ನೂ ರದ್ದು ಮಾಡಿ ನೇರವಾಗಿ ಹಳೆ ಪದ್ದತಿಯಂತೆ ಆಯ್ಕೆಮಾಡಬೇಕು. ಜೊತೆಗೆ ದೀಪಾಲಂಕಾವನ್ನ ಹೆಚ್ಚಿನ ದಿನಗಳವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಕಳೆದ ವರ್ಷ ಸಸ್ಯಹಾರಿ ಮಳಿಗೆಗಳಿಗೆ 59 ಸಾವಿರ, ಮಾಂಸಹಾರಿ ಮಳಿಗೆಗಳಿಗೆ 88,500 ದುಬಾರಿ ಮೊತ್ತ ನಿಗದಿ ಮಾಡಿದರು. ಮಳಿಗೆ ದರ ನಿಗದಿ ಕಡಿಮೆ ಮಾಡಬೇಕು. ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಿದರೆ ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುವ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ. ದಯಮಾಡಿ ಹಳೆ ಪದ್ದತಿಯನ್ನ ಜಾರಿಗೊಳಿಸಬೇಕು ಎಂದು ನಾಗರಾಜು ಮತ್ತು ಕಾರ್ಯದರ್ಶಿ ಕಂಸಾಳೆ ರವಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು.

Key words: Mysore Dasara, Food Fair, selection, vendors, lottery