ಮೈಸೂರು,ಸೆಪ್ಟಂಬರ್,15,2023(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂಭ್ರಮಕ್ಕೆ ಇನ್ನೊಂದು ತಿಂಗಳು ಬಾಕಿ ಇದ್ದು ಈಗಾಗಲೇ ಕಾಡಿನಿಂದ ನಾಡಿಗೆ ಆಗಮಿಸಿ ಮೈಸೂರು ಅರಮನೆಯಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆ ಆನೆಗಳಿಗೆ ಇಂದಿನಿಂದ ಮರಳು ಮೂಟೆ ಹೊರಿಸುವ ತಾಲೀಮು ಶುರುವಾಗಿದೆ.
ಅರಮನೆಯ ಆವರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಪೂಜೆ ಸಲ್ಲಿಸುವ ಮೂಲಕ ದಸರಾ ಆನೆಗಳಿಗೆ ಮರಳು ಮೂಟೆ ಹೊರಿಸುವ ತಾಲೀಮಿಗೆ ಚಾಲನೆ ಸಿಕ್ಕಿತು. ಕೊಡಿ ಸೋಮೇಶ್ವರ ದೇವಸ್ಥಾನದ ಮುಂಭಾಗ ಅಭಿಮನ್ಯು ಆನೆಗೆ ಗಾದಿ ಕಟ್ಟಿ, ತೊಟ್ಟಿಲಲ್ಲಿ ಮರಳು ಮೂಟೆ ಇಟ್ಟು ತಾಲಿಮು ಆರಂಭಿಸಲಾಯಿತು. ಮೊದಲ ದಿನವೇ 600 ಕೆಜಿ ತೂಕದ ತಾಲೀಮು ನಡೆಸಲಾಯಿತು.
ಈ ಕುರಿತು ಮಾತನಾಡಿದ ಸಿಎಫ್ ಮಾಲತಿ ಪ್ರಿಯಾ, ಇಂದಿನಿಂದ ಅಭಿಮನ್ಯುವಿಗೆ 600 ಕೆಜಿ ಭಾರ ಹೊರಿಸುತ್ತೇವೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ತೂಕ ಹೆಚ್ಚಿಸುತ್ತೇವೆ. 5 ಆನೆಗಳಿಗೆ ಭಾರ ಹೊರಿಸುವ ಕೆಲಸ ಮಾಡುತ್ತೇವೆ. ಅಭಿಮನ್ಯು ,ಧನಂಜಯ, ಭೀಮ,ಕಂಜನ್, ಗೋಪಾಲಸ್ವಾಮಿ ಆನೆಗಳಿಗೆ ಭಾರ ಹೊರಿಸುತ್ತೇವೆ. ಮುಂದಿನ ದಿನಗಳಲ್ಲಿ 600ರಿಂದ 1200 ಕೆಜಿಯವರೆಗೂ ತೂಕ ಹೊರಿಸುತ್ತೇವೆ. ಇದೇ ಸೆ.25ಕ್ಕೆ ಎರಡನೇ ಹಂತದಲ್ಲಿ 5 ಆನೆಗಳು ಬರಲಿವೆ. ಸದ್ಯ ಎಲ್ಲಾ ಆನೆಗಳ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ಮಾಹಿತಿ ನೀಡಿದರು.
Key words: Mysore dasara-Gajapade- elephants – sand- training