ಮೈಸೂರು,ಅ,2,2020(www.justkannada.in): ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಕರೋನಾ ಭೀತಿ ಹಿನ್ನೆಲೆಯಲ್ಲಿ ಹಲವಾರು ಮುಂಜಾಗ್ರತೆಗೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗಳ ಪೈಕಿ ಕೇವಲ ಐದು ಆನೆಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಿದೆ. ಇಷ್ಟೆಲ್ಲಾ ಮುಂಜಾಗ್ರತೆ ವಹಿಸಿದ್ದರೂ ಇಂದು ನಡೆದ ದಸರಾ ಗಜಪಡೆಗಳ ಅರಮನೆ ಪ್ರವೇಶ ಕಾರ್ಯಕ್ರಮದಲ್ಲಿ ಜನಜಂಗುಳಿ ಏರ್ಪಟ್ಟು ಕರೋನ ಭೀತಿ ಮರೆತರೇನು ಎಂಬಂತಾಗಿತ್ತು.
ಹೌದು, ಇಂದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗಳ ಸ್ವಾಗತ ಕಾರ್ಯಕ್ರಮ ಅರಮನೆ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ವೇಳೆ ಭಾಗವಹಿಸಿದ್ದವರ ಸಂಖ್ಯೆ ಸಾವಿರ ಗಡಿ ದಾಟುವ ಮೂಲಕ ಕೋವಿಡ್ ನಿಯಮದ ಸಂಪೂರ್ಣ ಉಲ್ಲಂಘನೆ ಕಂಡು ಬಂದಿತ್ತು.
ಇಂದು ಬೆಳಿಗ್ಗೆ ಅರಣ್ಯಭವನದಿಂದ ಮೈಸೂರು ಅರಮನೆಗೆ ಪ್ರವೇಶಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಆನೆಗಳ ಸ್ವಾಗತ ಕಾರ್ಯಕ್ರಮಕ್ಕೆ 150 ರಿಂದ 200 ಮಂದಿ ಭಾಗವಹಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಪೋಲಿಸ್ ಬ್ಯಾಂಡ್ 20 ಮಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಮಾವುತ, ಕಾವಾಡಿಗಳು ಸೇರಿ 50 ಮಂದಿ, ಅರಮನೆ ಸಿಬ್ಬಂದಿಗಳು 20 ಮಂದಿ, ಅಧಿಕಾರಿಗಳು ಪೊಲೀಸರು ಸೇರಿ 30 ಮಂದಿ, ಶಾಸಕರು ಸಚಿವರು ಜನಪ್ರತಿನಿಧಿಗಳು ಗಣ್ಯರು 27 ಮಂದಿ ಇವರ ಗನ್ ಮ್ಯಾನ್ ಹಾಗೂ ಆಪ್ತ ಸಹಾಯಕರು, ವಾಹನ ಚಾಲಕರು ಸೇರಿ 90 ಮಂದಿ ಸೇರಿ ಒಟ್ಟು 200 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇತ್ತು.
ಆದರೆ ಗಜಪಡೆ ಸ್ವಾಗತದ ವೇಳೆ ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದು ಅರಮನೆ ಆವರಣ ಜಾತ್ರೆಯಂತೆ ಕಂಡು ಬಂದಿತ್ತು. ಹೀಗಾಗಿ ದಸರಾ ಆರಂಭದಲ್ಲೇ ಈ ರೀತಿ ಕೋವಿಡ್ ನಿಯಮ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದರೇ ಮುಂದೆ ದಸರಾ ಉದ್ಘಾಟನೆ, ಜಂಬೂ ಸವಾರಿಯಂತಹ ಕಾರ್ಯಕ್ರಮಗಳಲ್ಲಿ ಹೇಗೆ ಕೊರೋನಾ ನಿಯಮ ಪಾಲನೆಯಾಗುತ್ತದೆಂಬ ಅನುಮಾನ ಕಾಡಿದೆ.
Key words: mysore-dasara-gajapade-welcome-Violation – Covid rule