ಗಜಪಯಣಕ್ಕೆ ನಾಳೆ ಚಾಲನೆ ನೀಡಲಿರುವ ಆರ್.ಅಶೋಕ್ ; ಮೈಸೂರು ಜಿಲ್ಲೆ ಉಸ್ತುವಾರಿ ಮುನ್ಸೂಚನೆಯಾ..?

 

ಮೈಸೂರು, ಆ.21, 2019 : (www.justkannada.in news) : ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗುವ ಮುನ್ಸೂಚನೆಯನ್ನು ದಸರ ‘ಗಜಪಯಣ’ ನೀಡಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ನಿನ್ನೆಯಷ್ಟೆ ರಚಿತವಾಗಿದೆ. ಸಚಿವ ಸ್ಥಾನ ವಂಚಿತರ ಆಕ್ರೋಶ ಭುಗಿಲೇಳುವ ಲಕ್ಷಣಗಳು ಗೋಚರಿಸುತ್ತಿದೆ. ಹಿರಿಯ ಶಾಸಕರುಗಳೇ ಹೈಕಮಾಂಡ್ ನಿರ್ಧಾರದ ವಿರುದ್ಧ ಸಿಡಿದಿದ್ದು ಪರಿಸ್ಥಿತಿ ಬಿಗಾಡಿಸಿದೆ. ಇದೇ ವೇಳೆ ಸಂಪುಟಕ್ಕೆ ಸೇರ್ಪಡೆಗೊಂಡವರಿಗೆ ಖಾತೆ ಹಂಚಿಕೆ ಹಾಗೂ ಉಸ್ತುವಾರಿ ನೀಡುವ ಮತ್ತೊಂದು ಸಂಕಟ ಯಡಿಯೂರಪ್ಪಗೆ ಎದುರಾಗಿದೆ.

ಈ ನಡುವೆ ಮೈಸೂರು ಸೇರಿದಂತೆ ಚಾಮರಾಜನಗರ, ಮಂಡ್ಯ, ಮಡಿಕೇರಿ ಜಿಲ್ಲೆಗಳನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ಯಾರೊಬ್ಬರಿಗೂ ಸ್ಥಾನ ನೀಡದಿರುವುದು ಈ ಭಾಗದಲ್ಲಿನ ಕಾರ್ಯಕರ್ತರ ಅಸಮಧಾನಕ್ಕೆ ಕಾರಣವಾಗಿದೆ. ಭಿನ್ನಮತ ಶಮನಗೊಳಿಸಿ ಪಕ್ಷದ ನಾಯಕರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವ ಹೊಣೆಗಾರಿಕೆ ಉಸ್ತುವಾರಿ ಸಚಿವರ ಮೇಲಿರುತ್ತದೆ. ಹಾಗಾಗಿ ಮೈಸೂರು ಜಿಲ್ಲೆಗೆ ಉಸ್ತುವಾರಿ ಯಾರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು.

ಈ ಮೊದಲು ಸಚಿವರಾದ ವಿ.ಸೋಮಣ್ಣ, ಸುರೇಶ್ ಕುಮಾರ್, ಕೆ.ಎಸ್.ಈಶ್ವರಪ್ಪ ಅವರ ಹೆಸರುಗಳು ಕೇಳಿ ಬಂದಿದ್ದವು. ಆದರೆ ಅಚ್ಚರಿ ಎಂಬಂತೆ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರಿಗೆ ಜವಾಬ್ದಾರಿ ನೀಡುವ ನಿಟ್ಟಿನಲ್ಲಿ ಬೆಳವಣಿಗೆ ನಡೆದಿರುವುದು.

ಇದೇ ಕಾರಣ :
ದಸರ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆಗಳನ್ನು ನಾಡಿಗೆ ಸ್ವಾಗತಿಸುವ ಕಾರ್ಯಕ್ರಮವೇ ಗಜಪಯಣ. ಇದು ಪ್ರತಿ ವರ್ಷ ಕಾಡಂಚಿನ ಗ್ರಾಮ ವೀರನಹೊಸಳ್ಳಿಯಲ್ಲಿ ಆಯೋಜಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರೇ ಈ ಗಜಪಯಣ ಕಾರ್ಯಕ್ರಮಕ್ಕೆ ಚಾಲನೆ ನೀಡುವವರು.

ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನೀಡಿರುವ ಮಾಹಿತಿ ಪ್ರಕಾರ, ನಾಳೆ ಬೆಳಗ್ಗೆ 11 ಗಂಟೆಗೆ ವೀರನಹೊಸಳ್ಳಿಯಲ್ಲಿ ಆಯೋಜಿಸಿರುವ ಗಜಪಯಣ ಸಮಾರಂಭದಲ್ಲಿ ಸಚಿವ ಆರ್.ಅಶೋಕ್ ಭಾಗವಹಿಸುವರು. ಮಾತ್ರವಲ್ಲದೆ, ಮಧ್ಯಾಹ್ನ 2 ಗಂಟೆ ಬಳಿಕ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲಿಸುವರು. ಸಂಜೆ 5 ಗಂಟೆಗೆ ಮೈಸೂರು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸುವರು.
ಸಚಿವ ಆರ್.ಅಶೋಕ್ ಅವರ ಕಾರ್ಯಕ್ರಮಗಳ ವಿವರ ಗಮನಿಸಿದೆ ಮೈಸೂರು ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.

key words : mysore-dasara-gajapayana-r.ashoka-bjp-incharge-minister