ಮೈಸೂರು,ಆಗಸ್ಟ್,6,2022(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮ ಗಜಪಯಣ ನಾಳೆ ಆರಂಭವಾಗಲಿದೆ. ಮೈಸೂರಿನ ನಾಗರಹೊಳೆಯ ಹೆಬ್ಬಾಗಿಲು ವೀರನಹೊಸಳ್ಳಿಯಲ್ಲಿ ದಸರಾ ಗಜಪಯಣಕ್ಕೆ ನಾಳೆ ಚಾಲನೆ ಸಿಗಲಿದೆ. ಈ ಹಿನ್ನೆಲೆ ಗಜಪಯಣ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ. ನಾಳೆ ಕಾಡಿನಿಂದ ನಾಡಿಗೆ ದಸರಾ ಗಜಪಡೆ ಕಾಲಿಡಲಿದ್ದು, ಆ ಮೂಲಕ ಅರಮನೆ ನಗರಿಯಲ್ಲಿ ನಾಡಹಬ್ಬದ ಗತ ವೈಭವ ಕಳೆಗಟ್ಟಲಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನು ಎರಡು ತಿಂಗಳು ಬಾಕಿ ಇದೆ. ವಿಶ್ವ ಪ್ರಸಿದ್ಧ ಮೈಸೂರು ಜಂಬೂ ಸವಾರಿ ಮೆರವಣಿಗೆಗೆ ಗಜಪಯಣಯನ್ನು ಸನ್ನದ್ಧಗೊಳಿಸಲು ಎರಡು ತಿಂಗಳು ಮುಂಚಿತವಾಗಿ ಗಜಪಡೆ ಮೈಸೂರಿಗೆ ಆಗಮಿಸುತ್ತಿವೆ. ಕಾಡಿನಲ್ಲಿರುವ ದಸರಾ ಆನೆಗಳು ನಾಳೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿವೆ. ಮೈಸೂರಿನ ನಾಗರಹೊಳೆಯ ಹೆಬ್ಬಾಗಿಲು ವೀರನಹೊಸಳ್ಳಿಯಲ್ಲಿ ಸಾಂಪ್ರದಾಯಿಕವಾಗಿ ಪುಜೆ ಪುನಸ್ಕಾರ ಮಾಡುವ ಮೂಲಕ ದಸರಾ ಗಜಪಡೆಯನ್ನ ಕರೆತರಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಟಿ.ಸೋಮಶೇಖರ್ ಗಜಪಯಣಕ್ಕೆ ನಾಳೆ ಚಾಲನೆ ನೀಡಲಿದ್ದು, ಮೊದಲ ಹಂತದಲ್ಲಿ 9 ಆನೆಗಳು ನಾಳೆ ಆರಂಭವಾಗುವ ಗಜಪಯಣದಲ್ಲಿ ಮೈಸೂರಿಗೆ ಆಗಮಿಸಲಿವೆ.
ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಡಿಸಿಎಫ್ ಕರಿಕಾಳನ್, ಈಗಾಗಲೇ ದಸರಾ ಮಹೋತ್ಸವದಲ್ಲಿ ಭಾಗಿಯಾಗುವ ಅಭಿಮನ್ಯು ನೇತೃತ್ವದಲ್ಲಿ 14 ಆನೆಗಳ ಪಟ್ಟಿ ಸಿದ್ದವಾಗಿದೆ. ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಭೀಮ, ಗೋಪಾಲ ಸ್ವಾಮಿ, ಅರ್ಜುನ, ವಿಕ್ರಮ, ಧನಂಜಯ, ಗೋಪಿ, ಕಾವೇರಿ, ಶ್ರೀರಾಮ, ವಿಜಯ, ಚೈತ್ರ, ಲಕ್ಷ್ಮಿ, ಪಾರ್ಥಸಾರಥಿ ಪಾಲ್ಗೊಳ್ಳಲಿವೆ. ಎರಡನೇ ಹಂತದಲ್ಲಿ ಐದು ಆನೆಗಳು ಮೈಸೂರಿಗೆ ಆಗಮಿಸಲಿವೆ. ದಸರಾ ಆನೆಗಳ ಜೊತೆ ಮಾವುತರು ಹಾಗೂ ಕಾವಾಡಿಗಳ ಕುಟುಂಬಸ್ಥರು ಕೂಡ ಮೈಸೂರಿಗೆ ಆಗಮಿಸಲಿದ್ದಾರೆ. ಹೀಗಾಗಿ ಅರಮನೆಯಂಗಳದಲ್ಲಿ ಗಜಪಡೆಗೆ, ಮಾವುತರು, ಕಾವಾಡಿಗಳ ಕುಟುಂಬಸ್ಥರ ವಾಸ್ತವ್ಯಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನಾಳೆ ಬೆಳಿಗ್ಗೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಿಂದ ಹೊರಡುವ ಆನೆಗಳು ನಾಳೆ ಸಂಜೆ ವೇಳೆಗೆ ಮೈಸೂರಿನ ಅರಣ್ಯ ಭವನದ ಆವರಣಕ್ಕೆ ಆಗಮಿಸಿ ಅಲ್ಲೇ ವಾಸ್ತವ್ಯ ಹೂಡಲಿವೆ. ನಂತರ ಆಗಸ್ಟ್ 10 ರಂದು ಅರಣ್ಯಭವನದಿಂದ ಮೇರವಣಿಗೆ ಮೂಲಕ ಬರುವ ಆನೆಗಳನ್ನ ಮೈಸೂರು ಅರಮನೆಯ ಜಯ ಮಾರ್ತಾಂಡ ದ್ವಾರದಲ್ಲಿ ದಸರಾ ಗಜಪಡೆಯನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುತ್ತದೆ. ಗಜಪಡೆ ಅರಮನೆ ಪ್ರವೇಶಿಸುತ್ತಿದ್ದಂತೆ ದಸರಾ ಸಂಭ್ರಮ ಮತ್ತಷ್ಟು ಕಳೆಗಟ್ಟಲಿದೆ ಎಂದು ಹೇಳಿದರು.
Key words: mysore dasara-gajapayana- tomorrow