ಮೈಸೂರು ಸೆ.29,2019(www.justkannada.in): ಮೈಸೂರು ದಸರಾ ಹಬ್ಬಕ್ಕೆ ಲಕ್ಷಾಂತರ ಪ್ರವಾಸಿಗರು ಆಗಮಿಸಲಿದ್ದು, ಆಹಾರ ಮೇಳದಲ್ಲಿ ಉತ್ತಮ ಹಾಗೂ ಗುಣಮಟ್ಟದ ಆಹಾರ ನೀಡಿ ಪ್ರವಾಸಿಗರ ಮನ ಗೆಲ್ಲಬೇಕು ಎಂದು ವಸತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ ಅವರು ಸೂಚಿಸಿದರು.
ನಗರದ ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾಗಿರುವ ದಸರಾ ಆಹಾರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ವಿ.ಸೋಮಣ್ಣ, ಆಹಾರ ಮೇಳ ಎಂದರೆ ಅತಿ ಹೆಚ್ಚಿನ ಸಂಖ್ಯೆಯ ಜನರು ಸೇರುವ ಸ್ಥಳ ಹಾಗಾಗಿ ಮೊದಲು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಬೇಕು ಮತ್ತು ಕಲಬೆರಕೆ ಆಹಾರ ನೀಡದ ರೀತಿ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ಸುಮಾರು 12 ದಿನಗಳು ನಡೆಯುವ ಈ ಕಾರ್ಯಕ್ರಮ ನಗರದ ಭಾರತ್ ಸ್ಕೌಡ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಸುಮಾರು 95 ಮಳಿಗೆಗಳು ಮತ್ತು ಲಲಿತ ಮಹಲ್ ಹತ್ತಿರದ ಮುಡಾ ಮೈದಾನದಲ್ಲಿ 75 ಮಳಿಗೆಗಳು ಸ್ಥಾಪಿಸಲಾಗಿದ್ದು, ಹಲವಾರು ವಿಭಿನ್ನ ಆಹಾರ ಪದಾರ್ಥಗಳನ್ನು ನೀಡಲಾಗುವುದು. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರುಚಿ ರುಚಿ ಆಹಾರ ಸೇವನೆ ಮಾಡಿ ಎಂದರು.
ಇದೇ ಸಂದರ್ಭದಲ್ಲಿ ಮಹಿಳೆಯರಿಗಾಗಿ ಮಕ್ಕಳಿಗೆ ಹಾಲುನಿಸುವ ಮಳಿಗೆ ಹಾಗೂ ಆಸ್ಪತ್ರೆ ಮಳಿಗೆಯನ್ನು ಉದ್ಘಾಟಿಸಿ, ನಂತರ ಎಲ್ಲಾ ಮಳಿಗೆಗಳನ್ನು ವೀಕ್ಷಣೆ ಮಾಡಿ ಎಲ್ಲರಿಗೂ ಆದಷ್ಟು ಕಡಿಮೆ ದರದಲ್ಲಿ ಆಹಾರ ನೀಡಲು ಸಚಿವ. ಸೋಮಣ್ಣ ತಿಳಿಸಿದರು.
ಕಾರ್ಯಕ್ರಮ ದಲ್ಲಿ ಶಾಸಕ ಎಲ್.ನಾಗೇಂದ್ರ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಮ್, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಮುಡಾ ಆಯುಕ್ತರಾದ ಪಿ.ಎಸ್ ಕಾಂತರಾಜ್, ಆಹಾರ ಸಮಿತಿ ಕಾರ್ಯದರ್ಶಿ ಶಿವಣ್ಣ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Key words: mysore dasara – good and qualityy -food – tourists-minister-V.Somanna