ದಸರಾ ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ- ಸಾಹಿತಿ ಹಂಪ ನಾಗರಾಜಯ್ಯ ನುಡಿ

ಮೈಸೂರು,ಅಕ್ಟೋಬರ್,3,2024 (www.justkannada.in): ದಸರಾ ಹಬ್ಬವು ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ. ಆಸ್ತಿಕತೆ ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತ ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ನುಡಿದರು.

ಇಂದು ಚಾಮುಂಡಿ ಬೆಟ್ಟದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಉದ್ಘಾಟಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ,ಕೆ.ಶಿವಕುಮಾರ್ , ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಸೇರಿದಂತೆ ಅನೇಕ ಗಣ್ಯರು ಸಾಥ್ ನೀಡಿದರು.

ಮೈಸೂರು ದಸರಾ ಉದ್ಘಾಟಿಸಿ ಮಾತನಾಡಿದ  ನಾಡೋಜ ಹಂಪ ನಾಗರಾಜಯ್ಯ, ದಸರಾ ಅರಮನೆ ಹಬ್ಬವಲ್ಲ. ಜನರ ಆರಿಸಿದ ಸರಕಾರ ನಡೆಸುವ ಜನರ ಹಬ್ಬ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಎಷ್ಟೆ ಅಡ್ಡಿ ಆತಂಕ ಎದುರಾಗುತ್ತಿದ್ದರು. ಎದೆಗುಂದದೆ ಸಡ್ಡು ಹೊಡೆದು ಗಟ್ಟಿಯಾಗಿ ನಿಂತಿದ್ದಾರೆ. ಜೀವನವೇ ದೊಡ್ಡ ಅಖಾಡ. ಅದರಲ್ಲಿ ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ ಸೌಮ್ಯತೆ ದೌರ್ಬಲ್ಯವಲ್ಲ. ಪ್ರತಿಕೂಲ ಪ್ರವಾಹವನ್ನು ಎದುರಿಸುವ ಧೀಶಕ್ತಿ ಪ್ರತಿಯೊಬ್ಬರಲ್ಲೂ ಇರಬೇಕು ಎನ್ನುವ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೆ ಧೈರ್ಯ ತುಂಬಿದರು.

ಸರ್ಕಾರಗಳನ್ನ ಉರುಳಿಸುವ ದುರಾಲೋಚನೆ ಬರದಂತೆ ತಡೆಯಬೇಕು

ಸರ್ಕಾರ ಅಸ್ಥಿರತೆ ಮಾಡಬೇಡಿ ಎಂಬ ಕಿವಿಮಾತು ಹೇಳಿದ ಹಂಪ ನಾಗರಾಜಯ್ಯ, ಸರ್ಕಾರಗಳನ್ನ ಉರುಳಿಸುವ ದುರಾಲೋಚನೆ ಬರದಂತೆ ತಡೆಯಬೇಕು. ಚುನಾಯಿತ ಸರ್ಕಾರಗಳನ್ನ ಉಳಿಸುವ ಚಿಂತನೆ ಆಗಬೇಕು. ಲೋಕಾಂಬಿಕೆಯೂ ಅಂತಹ ಚಿಂತನೆ ಮೂಡಿಸಲಿ. ಕೆಡುವುದು ಸುಲಭ, ಕಟ್ಟುವುದು ಕಷ್ಟ. ಮೊದಲೇ ದೊಡ್ಡ ಹೊರೆಗಳಿಂದ ಶ್ರೀಸಾಮಾನ್ಯರು ಬಳಲಿ ಬಸವಳಿದಿದ್ದಾರೆ. ಪುನಃ ನಡೆಯುವ ಚುನಾವಣೆಗಳು ದೊಡ್ಡ ಹೊರೆಯಾಗಲಿವೆ. ಜನರಿಗೆ ಇನ್ನಷ್ಟು ಭಾರ ಹೇರಿದರೆ ಕುಸಿದುಬಿಡುತ್ತಾನೆ ಯಾವ ಪಕ್ಷವೂ ಅಧಿಕಾರದಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಚಕ್ರಾರ ಪಂಕ್ತಿರಿವ ಗಚ್ಛತಿ ಭಾಗ್ಯ ಪಂಕ್ತಿಃ ಸೋತ ಪಕ್ಷವು ಮತ್ತೆ ಅಧಿಕಾರಕ್ಕೆ ಬರಬಹುದು. ಜನಮನವನ್ನು ತಮ್ಮ ಪರವಾಗಿ ಒಲಿಸಿಕೊಳ್ಳಲು ಐದು ವರ್ಷ ಸಜ್ಜಾಗಬಹುದು ಎಂಬ ಎಚ್ಚರಿಕೆ ನೀಡಿದರು.

ದಿನನಿತ್ಯ ಪತ್ರಿಕೆಗಳಲ್ಲಿ ಪರಸ್ಪರ ದೋಷಾರೋಪಣೆ, ವೈಯಕ್ತಿಕ ನಿಂದನೆ, ಅವಾಚ್ಯ ಶಬ್ದಗಳ ಆಗುತ್ತಿದೆ.  ಆ ಪತ್ರಿಕೆಗಳನ್ನ ಓದಿ, ಯುವಕರು ಇದನ್ನೇ ಮಾದರಿಯಾಗಿ ಮುಂದುವರಿಸಿದರೆ ಏನುಗತಿ ? ಈ ಬೆಳವಣಿಗೆಗಳಿಂದ ಜನರು ಬೇಸರಗೊಂಡಿದ್ದಾರೆ ಎಂದು ಕಳವಳ. ತಾಯಿ ಚಾಮುಂಡೇಶ್ವರೀದೇವಿ, ಇನ್ನು ಮುಂದೆ ಈ ಪದ್ಧತಿ ನಿಲ್ಲುವಂತೆ ಮಾಡಲಿ. ಸಮಾಜಮುಖಿ ಚಿಂತನೆಯನ್ನು ಒಳಗೊಂಡು ಸಮೃದ್ಧ ರಾಷ್ಟ್ರ ನಿರ್ಮಾಣವಾಗಲಿ. ನಾಡು ಕಟ್ಟುವ ಯೋಜನೆ, ಯೋಚನೆಗಳನ್ನು ನಿರೂಪಿಸುವಂತೆ ಸ್ಪೂರ್ತಿ ಕೊಡಲಿ ಎಂದು  ಹಂಪನಾಗರಾಜಯ್ಯ ಪ್ರಾರ್ಥಿಸಿದರು.

Key words: Mysore Dasara, inaugurated, Hampa Nagarajaiah