ಮೈಸೂರು, ಅಕ್ಟೋಬರ್,7,2024 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಈ ಬಾರಿ ಧನಂಜಯ ಆನೆ ಆಯ್ಕೆಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು, ಕಳೆದ ಬಾರಿ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಅರ್ಜುನ ಹೆಜ್ಜೆ ಹಾಕಿದ್ದನು. ಈ ಬಾರಿ ಅರ್ಜುನನ ಸ್ಥಾನಕ್ಕೆ ಧನಂಜಯನನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಡಿಸಿಎಫ್ ಡಾ. ಪ್ರಭುಗೌಡ, ಜಂಬೂಸವಾರಿಯಲ್ಲಿ ನಾಡ ಅಧಿದೇವತೆಯನ್ನ ಹೊತ್ತು ಕ್ಯಾ.ಅಭಿಮನ್ಯು ಸಾಗಲಿದ್ದಾನೆ. ಅಭಿಮನ್ಯುಗೆ ಹಿರಣ್ಯ ಲಕ್ಷ್ಮಿ ಆನೆಗಳು ಕುಮ್ಕಿ ಆನೆಗಳಾಗಲಿವೆ. ನಿಶಾನೆ ಆನೆಯಾಗಿ ಧನಂಜಯ ಆಯ್ಕೆಯಾಗಿದ್ದಾನೆ. ಕಳೆದ ಬಾರಿ ನಿಶಾನೆ ಆನೆಯಾಗಿ ಅರ್ಜುನ ಸಾಗಿದ್ದನು. ಕಾಡಾನೆ ದಾಳಿಯಲ್ಲಿ ಅರ್ಜುನ ವೀರಮರಣವನ್ನಪ್ಪಿದ ಹಿನ್ನಲೆ, ಅರ್ಜುನನ ಸ್ಥಾನದಲ್ಲಿ ಧನಂಜಯ ಆಯ್ಕೆಯಾಗಿದ್ದಾನೆ. ಇನ್ನು ನೌಫತ್ ಆನೆಯಾಗಿ ಗೋಪಿ ಆಯ್ಕೆಯಾಗಿದ್ದಾನೆ. ಜಂಬೂಸವಾರಿಯಲ್ಲಿ 9ಆನೆಗಳು ಭಾಗಿಯಾಗಲಿವೆ. ಇನ್ನು ಉಳಿದ ಆನೆಗಳು ಭಾಗಿಯಾಗುವುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದರು
ಶ್ರೀರಂಗಪಟ್ಟಣ ದಸರಾದಲ್ಲಿ ಲಕ್ಷ್ಮಿ ಆನೆ ವಿಚಲಿತಗೊಂಡ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಾ.ಪ್ರಭುಗೌಡ, ಲಕ್ಷ್ಮಿ ಆನೆ ವಾಪಾಸ್ ಕರೆದುಕೊಂಡು ಹೋಗುತ್ತಾರೆ ಎಂದು ಕೆಲ ಕಾಲ ಲಾರಿ ಹತ್ತಲು ಹಿಂದೇಟು ಹಾಕಿದ. ಬಳಿಕ ನಮ್ಮ ಮಾವುತರು ಕಾವಾಡಿಗರು ಲಾರಿ ಹತ್ತಿಸುವ ಕೆಲಸಕ್ಕೆ ಮುಂದಾದರು. ಅದಕ್ಕೂ ಮುಂಚೆ 3ಗಂಟೆ ಅಂಬಾರಿ ಆನೆ ಜೊತೆ ಲಕ್ಷಾಂತರ ಜನರ ನಡುವೆ ಯಶಸ್ವಿಯಾಗಿ ಹೆಜ್ಜೆ ಹಾಕಿದೆ. ಲಕ್ಷ್ಮಿ ಆನೆ ಕೂಡ ಜಂಬೂಸವಾರಿಗೆ ಸಿದ್ದವಾಗಿದೆ ಎಂದು ತಿಳಿಸಿದ್ದಾರೆ.
Key words: Mysore Dasara, jambu savari, ‘Dhananjaya, place of Arjuna