ಮೈಸೂರು,ಅಕ್ಟೋಬರ್,15,2021(www.justkannada.in): ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಗರದೆಲ್ಲೆಡೆ ದೀಪಾಲಂಕಾರ ಮಾಡಲಾಗಿದ್ದು ವಿದ್ಯುತ್ ದೀಪಗಳಿಂದ ಅರಮನೆ ನಗರಿ ಕಂಗೊಳಿಸಿದೆ. ಈ ಮಧ್ಯೆ ಇಂದಿನಿಂದ 9 ದಿನಗಳ ಕಾಲ ದೀಪಾಲಂಕಾರ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಇಂದು ನಡೆಯಲಿರುವ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲು ಮೈಸೂರಿಗೆ ಆಗಮಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು.
ನಾಡಿನಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲಿ. ನಾಡನ್ನ ಸುಭೀಕ್ಷವಾಗಿ ಇಡುವಂತೆ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ. ದೀಪಾಲಂಕಾರ ವಿಸ್ತರಣೆಗೆ ಬೇಡಿಕೆ ಹೆಚ್ಚಾಗಿದೆ. ನಾಡಿನ ಮೂಲೆ ಮೂಲೆಗಳಿಂದ ಹೆಚ್ಚು ಜನ ಬಂದು ದೀಪಾಲಂಕಾರ ವೀಕ್ಷಣೆ ಮಾಡಿದ್ದಾರೆ. ಹಾಗಾಗಿ ದಸರಾ ದೀಪಾಲಂಕಾರ ವಿಸ್ತರಣೆ ಮಾಡಲಾಗಿದೆ. ಮುಂದಿನ ಒಂಬತ್ತು ದಿನಗಳ ಕಾಲ ದೀಪಾಲಂಕಾರ ಇರಲಿದೆ. ಸಾಧ್ಯವಾದ್ರೆ ಇಂದು ರಾತ್ರಿ ದೀಪಾಲಂಕಾರ ವೀಕ್ಷಿಸುವೆ. ಕುಟುಂಬ ಸಮೇತ ದೀಪಾಲಂಕಾರ ವೀಕ್ಷಣೆ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
Key words: mysore –dasara- Lighting -extension – 9 days -CM Bommai -Announced