ಮೈಸೂರು, ಸೆಪ್ಟಂಬರ್,12,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಕವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದ್ದು ಈ ನಡುವೆ ಅಕ್ಟೋಬರ್ 17 ರಂದು ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.
ಇಂದು ದಸರಾಕಾರ್ಯಕಾರಿ ಸಮಿತಿ ಸಭೆ ನಡೆದ ಬಳಿಕ ಮಾಹಿತಿ ನೀಡಿದ ಸಚಿವ ಎಸ್.ಟಿ ಸೋಮಶೇಖರ್, ಅಕ್ಟೋಬರ್ 17 ರಂದು ಬೆಳಿಗ್ಗೆ 7:45 ರಿಂದ 8:15 ರೊಳಗಿನ ಶುಭ ಮುಹೂರ್ತದಲ್ಲಿ ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ. ಈ ಬಾರಿ ಜಂಬೂ ಸವಾರಿಯಲ್ಲಿ ಅಂಬಾರಿ ಕೂಂಬಿಂಗ್ ಸ್ಪೇಷಲಿಸ್ಟ್ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಅಭಿಮನ್ಯುವಿಗೆ ಈಗಾಗಲೇ ಟ್ರೈನಿಂಗ್ ಕೊಡಲಾಗಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊತ್ತು ಸಾಗಲಿದೆ. ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ಅರ್ಜುನನಿಗೆ 60 ವರ್ಷ ಮೀರಿರುವುದರಿಂದ ಅಂಬಾರಿ ಹೊರುವ ಅವಕಾಶವಿಲ್ಲ. ಅಭಿಮನ್ಯು ಜೊತೆಗೆ ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳು ಮಾತ್ರ ದಸರಾ ಮಹೋತ್ಸವದಲ್ಲಿ ಭಾಗಿಯಾಗಲಿವೆ. ಐದು ಆನೆಗಳನ್ನ ಮಾತ್ರ ಜಂಬೂ ಸವಾರಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಇನ್ನು ಸಾಂಪ್ರದಾಯಿಕವಾಗಿ ಅಕ್ಟೋಬರ್ 2 ರಂದು 12:18ನಿಮಿಷಕ್ಕೆ ಗಜಪಯಣ ಆರಂಭವಾಗಲಿದ್ದು ವೀರನ ಹೊಸಹಳ್ಳಿ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮವಿರುವುದಿಲ್ಲ. ಸಾಂಪ್ರದಾಯಿಕವಾಗಿ ಜಿಲ್ಲಾಧಿಕಾರಿಗಳು ದಸರಾ ಆನೆಗಳನ್ನು ಸ್ವಾಗತ ಮಾಡಲಿದ್ದಾರೆ. ಅಂಬಾವಿಲಾಸ ಅರಮನೆಯ ಆವರಣಕ್ಕೆ ಸಾಂಪ್ರದಾಯಿಕವಾಗಿ ಗಜಪಡೆಯನ್ನ ಸ್ವಾಗತ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.
ಪ್ರತಿ ವರ್ಷದಂತೆ ಈ ಬಾರಿಯೂ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ
ಪ್ರತಿ ವರ್ಷದಂತೆ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ ಇರಲಿದೆ. ಚೆಸ್ಕಾಂ ಇದರ ಜವಾಬ್ದಾರಿ ಹೊರುತ್ತದೆ. ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ವಿಚಾರ ಸಂಬಂಧ ಕಮಿಟಿ ಮಾಡಲಿದ್ದೇವೆ. ಅರಮನೆಯಂಗಳದಲ್ಲಿ 9 ದಿನಗಳ ಕಾರ್ಯಕ್ರಮ ಇರಲಿದೆ. 9 ದಿನಗಳ ಕಾಲ ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಒಂದು ದಿನಕ್ಕೆ ಒಂದು ಕಾರ್ಯಕ್ರಮ ಇರಲಿದೆ ಎಂದು ಸಚಿವ ಸೋಮಶೇಖರ್ ಮಾಹಿತಿ ನೀಡಿದರು.
ಜಂಬೂ ಸವಾರಿ ಅರಮನೆಯಂಗಳದಲ್ಲಿ ಮಾತ್ರ ನಡೆಯಲಿದೆ. ನಂದಿಧ್ವಜ , ಚಾಮುಂಡೇಶ್ವರಿ ಪೂಜೆಗೆ ಲಿಮಿಟೆಡ್ ಗಣ್ಯರು ಭಾಗಿಯಾಗಲಿದ್ದಾರೆ. ಅಂದು ಸಿಎಂ ಆಗಮಿಸಲಿದ್ದಾರೆ. ಜಂಬೂ ಸವಾರಿಗೆ ಕೇಂದ್ರ ಸರ್ಕಾರದ ಕಾನೂನಿನ ಅನ್ವಯ ಜನ ಸೇರಲಿಕ್ಕೆ ಅವಕಾಶ ಇರಲಿದೆ. ಸುಮಾರು ಎರಡು ಸಾವಿರ ಜನ ದಸರಾ ವೀಕ್ಷಿಸಲು ಮನವಿ ಮಾಡುತ್ತೇವೆ. ಕೇಂದ್ರ ಯಾವ ರೀತಿ ಅನುಮತಿ ಕೊಡುತ್ತಾರೋ ಆ ರೀತಿ ವೀಕ್ಷಣೆಗೆ ವ್ಯವಸ್ಥೆ ಮಾಡುತ್ತೇವೆ. ನೇರ ಪ್ರಸಾರದ ಮೂಲಕ ಜಂಬೂ ಸವಾರಿ , ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಒಂಭತ್ತು ದಿನಗಳ ಕಾಲ ಚಾಮುಂಡೇಶ್ವರಿ ದೇಗುಲದಲ್ಲೂ ವಿಶೇಷ ಪೂಜಾ ಕೈಂಕರ್ಯ
ಒಂಭತ್ತು ದಿನಗಳ ಕಾಲ ಚಾಮುಂಡೇಶ್ವರಿ ದೇಗುಲದಲ್ಲೂ ವಿಶೇಷ ಪೂಜಾ ಕೈಂಕರ್ಯ ನಡೆಯಲಿದೆ. ದಸರಾ ಉದ್ಘಾಟಕರು ಯಾರು ಎಂಬುದನ್ನ ಸಿಎಂ ಫೈನಲ್ ಮಾಡ್ತಾರೆ. ದಸರಾ ಉದ್ಘಾಟನೆಗೆ ಡಾ.ರವಿ, ಡಾ.ಮಂಜುನಾಥ್ ಹೆಸರು ಕೇಳಿ ಬಂದಿದೆ. ಅದನ್ನ ಸಿಎಂ ಫೈನಲ್ ಮಾಡಲಿದ್ದಾರೆ. ಐದು ಜನ ಕೊರೋನ ವಾರಿಯರ್ಸ್ನಲ್ಲಿ ಒಬ್ಬರು ಮಾತ್ರ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದರು.
ದಸರಾ ಅನುದಾನದಲ್ಲಿ ಲೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಸ್.ಟಿ ಸೋಮಶೇಖರ್, ನನ್ನ ಅವಧಿಯಲ್ಲಿ ದಸರಾ ಲೆಕ್ಕ ಲೋಪವಾಗಲು ಬಿಡಲ್ಲ. ನಾನು ದಸರಾ ಖರ್ಚು ವೆಚ್ಚದ ಬಗ್ಗೆ ಮಾಹಿತಿ ಕೊಟ್ಟೆ ಕೊಡ್ತೀನಿ ಎಂದು ತಿಳಿಸಿದರು.
Key words: mysore-dasara- minister- st somashekar-dasara -innaugration