ಮೈಸೂರು, ಸೆ.19,2019(www.justkannada.in): ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಸಿದ್ಧತೆ ಕಾರ್ಯಗಳು ಚುರುಕುಗೊಂಡಿವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆ, ದಸರಾ ಕುಸ್ತಿ ಅಖಾಡ ಹಾಗೂ ವಸ್ತುಪ್ರದರ್ಶನ ಆವರಣಕ್ಕೆ ಭೇಟಿ ನೀಡಿದ ಸಚಿವ ವಿ.ಸೋಮಣ್ಣ, ಅಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಮೈಸೂರು ಅರಮನೆ ಆವರಣ ಪರಿಶೀಲಿಸಿದ ಸಚಿವರು, ಜಂಬೂಸವಾರಿ ಸಾಗುವ ಮಾರ್ಗ, ನಾಡದೇವಿಗೆ ಪುಷ್ಪಾರ್ಚನೆ ಮಾಡುವ ಸ್ಥಳ, ಗಣ್ಯಾತಿ ಗಣ್ಯರು ಕೂರುವ ಸ್ಥಳ ಸೇರಿದಂತೆ ಜನಸಾಮಾನ್ಯರ ಪ್ರವೇಶದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜನಸಾಮಾನ್ಯರ ಪ್ರವೇಶ ಹಾಗೂ ಅಸನ ವ್ಯವಸ್ಥೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಿ ಹಾಗೂ ಗುಣಮಟ್ಟದ ಕಾಮಗಾರಿ ನಡೆಸಿ ಎಂದು ಅಧಿಕಾರಿಗಳಿಗೆ ಸಚಿವ ಸೋಮಣ್ಣ ಸೂಚಿಸಿದರು. ಆ ನಂತರ ಸಚಿವರು ಕುಸ್ತಿ ಅಖಾಡ ಹಾಗೂ ವಸ್ತುಪ್ರದರ್ಶನ ಆವರಣದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಮೇಯರ್ ಪುಷ್ಪಲತ ಜಗನ್ನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳ ಶ್ಯಾಂ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಡಿಸಿಪಿ ಮುತ್ತುರಾಜ್, ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ, ಕುಸ್ತಿ ಉಪಸಮಿತಿ ಉಪ ವಿಶೇಷಾಧಿಕಾರಿ ಸ್ನೇಹ, ಕಾರ್ಯದರ್ಶಿ ರವಿಕುಮಾರ್ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.
Key words: Mysore Dasara-Minister –v.somanna-Visit – Inspection – Mysore Palace