ಮೈಸೂರು, ಸೆ. 19,2019 (www.justkannada.in): ವಿಶ್ವವಿಖ್ಯಾತ ಮೈಸೂರು ದಸೆರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಪಂಜಿನ ಕವಾಯತು ಪ್ರದರ್ಶನವನ್ನು ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ನೋಡುವಂತಾಗಲು ಕ್ರಮ ಕೈಗೊಳ್ಳಲಾಗಿದೆ ಎಂದು ವಸತಿ ಸಚಿವರೂ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಇಂದು ತಿಳಿಸಿದರು.
ದಸರಾ ಹಿನ್ನೆಲೆಯಲ್ಲಿ ಪಂಜಿನ ಕವಾಯತು ಪ್ರದರ್ಶನ ನಡೆಯುವ ಬನ್ನಿಮಂಟಪಕ್ಕೆ ಭೇಟಿ ನೀಡಿದ ಸಚಿವ ವಿ.ಸೋಮಣ್ಣ, ಕವಾಯತು ಮೈದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಪಂಜಿನ ಕವಾಯತು ಮೈದಾನ 30 ಎಕರೆ ವಿಸ್ತೀರ್ಣ ಹೊಂದಿದ್ದು, ಈವರೆಗೆ 22 ಸಾವಿರ ಆಸನ ವ್ಯವಸ್ಥೆ ಹೊಂದಿತ್ತು. ಆದರೆ, ಈ ಬಾರಿ ಈ ಆಸನ ಸಾಮರ್ಥ್ಯವನ್ನು 32 ಸಾವಿರಕ್ಕೆ ವಿಸ್ತರಿಸಲಾಗಿದೆ. ಈ ಮೂಲಕ ಬಹು ಆಕರ್ಷಣೀಯವಾದ ಪಂಜಿನ ಕವಾಯತು ಪ್ರದರ್ಶನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯರು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ಪಂಜಿನ ಕವಾಯತು ಮೈದಾನದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 6.45 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಆ ಎಲ್ಲ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ನಾಡಹಬ್ಬ ಆಚರಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಅಕ್ಟೋಬರ್ 2ರಂದು ಇದೇ ಪಂಜಿನ ಕವಾಯತು ಮೈದಾನದಲ್ಲಿ ಏರ್ ಶೋ ನಡೆಸಲು ಯೋಜಿಸಲಾಗಿದೆ. ವೈಮಾನಿಕ ಪ್ರದರ್ಶನವನ್ನು ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಜನಾಕರ್ಷಣೆಯಾಗಿ ರೂಪಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ಇದೇ ವೇಳೆ, ಜಂಬೂಸವಾರಿ ಬನ್ನಿ ಮಂಟಪ ಪ್ರವೇಶಿಸುವ ಮಾರ್ಗ ಸೇರಿದಂತೆ, ವಿವಿಧ ಕಡೆಗಳ ಆಸನ ವ್ಯವಸ್ಥೆಗಳನ್ನು ಸಚಿವರು ಪರಿಶೀಲಿಸಿದರು. ಮೇಯರ್ ಪುಷ್ಪಲತ ಜಗನ್ನಾಥ್, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಡಿಸಿಪಿ ಮುತ್ತುರಾಜ್, ಮುಡಾ ಆಯುಕ್ತ ಕಾಂತರಾಜ್, ಉಪವಿಭಾಗಾಧಿಕಾರಿ ವೆಂಕಟರಾಜು ಮೊದಲಾದವರು ಉಪಸ್ಥಿತರಿದ್ದರು.
Key words: Mysore Dasara- opportunity – watch-panjina kawayathu-minister-V. Somanna…