ಮೈಸೂರು,ಸೆಪ್ಟಂಬರ್,25,2021(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ವಿಶೇಷ ಆಹಾರ ಹಾಗೂ ವಿಶೇಷ ಡಯಟ್ ಶುರುವಾಗಿದ್ದು ಭಾರಿ ಆತಿಥ್ಯ ನೀಡಲಾಗುತ್ತಿದೆ.
ದಸರಾ ಆನೆಗಳ ಆರೋಗ್ಯದ ಬಗ್ಗೆ ಇಲಾಖೆ ಸಂಪೂರ್ಣ ನಿಗಾ ಇಟ್ಟಿದ್ದು, ಆನೆಗಳ ಆರೋಗ್ಯಕ್ಕಾಗಿ ವಿಶೇಷ ಆಹಾರ ತಯಾರಿ ಮಾಡಲಾಗುತ್ತಿದೆ. ಪ್ರತಿಯೊಂದು ಆನೆಗೂ ಸುಮಾರು 15 ಕೆ.ಜಿಯಷ್ಟು ವಿಶೇಷ ಆಹಾರ ನೀಡಲಾಗುತ್ತಿದ್ದು, ಪ್ರತಿನಿತ್ಯ ತಾಲೀಮು ಮುಗಿದ ನಂತರ ಆನೆಗಳಿಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ.
ಆನೆಗಳಿಗೆ ಉದ್ದಿನ ಕಾಳು, ಹೆಸರು ಕಾಳು, ಗೋಧಿ, ಕುಸಲ ಅಕ್ಕಿ, ಗೆಡ್ಡೆ ಕೋಸು, ಮೂಲಂಗಿ, ಸವತೆಕಾಯಿ, ಕ್ಯಾರೆಟ್, ಬಿಟ್ರೋಟ್, ಈರುಳ್ಳಿ ಬೆಣ್ಣೆ. ಉಪ್ಪು ಮಿಶ್ರಣದ ಮುದ್ದೆ ನೀಡಿಲಾಗುತ್ತಿದೆ. ಈ ಎಲ್ಲಾ ಆಹಾರ ಪದಾರ್ಥಗಳನ್ನು ಹದವಾಗಿ ಬೇಯಿಸಿ ಮುದ್ದೆ ಮಾಡಿ ವಿಶೇಷ ಆಹಾರ ತಯಾರಿಸಿ ದಸರಾ ಗಜಪಡೆಗೆ ನೀಡಲಾಗುತ್ತಿದೆ.
8 ಆನೆಗಳಿಗೆ ಪ್ರತಿನಿತ್ಯ 120 ಕೆಜಿಯಷ್ಟು ವಿಶೇಷ ರೇಷನ್ ಅಗತ್ಯವಿದ್ದು, ಇದರ ಜೊತೆಗೆ ಭತ್ತದ ಹುಲ್ಲಿನೊಂದಿಗೆ ಭತ್ತ, ಹಿಂಡಿ, ತೆಂಗಿನಕಾಯಿ, ಬೆಲ್ಲವನ್ನು ಪ್ರತ್ಯೇಕವಾಗಿ ನೀಡಲಾಗುತ್ತಿದೆ. ಆನೆಗಳ ತೂಕ ಹೆಚ್ಚಿಸುವುದಲ್ಲದೆ ಅವುಗಳ ಆರೋಗ್ಯದ ದೃಷ್ಟಿಯಿಂದ ಈ ಡಯಟ್ ಪ್ಲಾನ್ ಮಾಡಲಾಗಿದ್ದು, ಡಯೆಟ್ ನ ಜೊತೆಯಲ್ಲಿ ತಾಲೀಮು ಹಾಗೂ ಇತರೆ ಚಟುವಟಿಕೆಗಳು ಮೇಲು ನಿಗಾ ಇರಿಸಲಾಗಿದೆ.
ಮೈಸೂರು ಅರಮನೆ ಆನೆಗಳ ಗುಜರಾತ್ ರಾಜ್ಯಕ್ಕೆ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮೈಸೂರು ಡಿಸಿಎಫ್ ಕರಿಕಾಳನ್, ಈಗಾಗಲೇ ನಮಗೆ ವೈಲ್ಡ್ ಲೈಫ್ ಮುಖ್ಯ ಅಧಿಕಾರಿಗಳಿಂದ ಪತ್ರ ಬಂದಿದೆ. ಅವರ ಸೂಚನೆಯಂತೆ ನಾವು ೬ ಆನೆಗಳ ಪೈಕಿ ೪ ಆನೆಗಳನ್ನು ಗುಜರಾತ್ ಗೆ ಕಳುಹಿಸಬೇಕಿದೆ. ಇನ್ನೊಂದು ವಾರದಲ್ಲಿ ಆನೆಗಳ ಆರೋಗ್ಯ ತಪಾಸಣೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಇನ್ನೊಂದು ವಾರದಲ್ಲಿ ಆನೆಗಳ ವೈದ್ಯಕೀಯ ತಪಾಸಣೆ ನಡೆಸಿ ವರದಿ ಸಲ್ಲಿಸಲಾಗುವುದು. ವೈಲ್ಡ್ ಲೈಫ್ ಚೀಫ್ ಅವರ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಗುಜರಾತ್ವ ರೆಗೆ ಆನೆಗಳನ್ನ ಕೊಂಡೊಯ್ಯುವುದು ಒಂದು ದೊಡ್ಡ ಟಾಸ್ಕ್. ಸುಮಾರು ೨-೩ ಸಾವಿರ ಕಿ.ಮೀದೂರ ಪ್ರಯಾಣ ಅಂದ್ರೆ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಸಿಜರ್ಸ್ ಮೂಲಕ ಆನೆಗಳನ್ನ ಸಾಗಿಸಬೇಕಾಗುತ್ತದೆ. ಆನೆಗಳ ಆಹಾರ, ಆರೋಗ್ಯ,ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಾಗಣೆ ಮಾಡಲಾಗುತ್ತದೆ ಎಂದಿದ್ದಾರೆ.
Key words: Mysore dasara-Palace-gajapade-Special food- Special Diet