ಮೈಸೂರು,ಅಕ್ಟೋಬರ್,26,2020(www.justkannada.in): ಮೈಸೂರು ದಸರಾ ಹಿನ್ನೆಲೆ ಅರಮನೆಯಲ್ಲಿ ಸಾಂಪ್ರದಾಯಿಕ ಪೂಜೆ ಪುನಸ್ಕಾರ ಆಚರಣೆ ಮಾಡಲಾಗುತ್ತಿದ್ದು. ಈ ಮಧ್ಯೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭುವನೇಶ್ವರಿ ದೇಗುಲದ ಬಳಿ ವಿಜಯಯಾತ್ರೆ ಮುಗಿಸಿ ವಾಪಸ್ ಹಿಂದಿರುಗುವ ವೇಳೆ ಎತ್ತುಗಳು ಆನೆಗಳನ್ನ ನೋಡಿ ಬೆದರಿದ ಘಟನೆ ನಡೆಯಿತು.
ಯದುವೀರ ಬನ್ನಿಪೂಜೆ ಮುಗಿಸಿ ವಾಪಸ್ ಅರಮನೆಗೆ ಹಿಂದಿರುಗುವ ವೇಳೆ ಈ ಘಟನೆ ನಡೆದಿದೆ. ಪಲ್ಲಕ್ಕಿಗೆ ಕಟ್ಟಲಾಗಿದ್ದ ಎತ್ತುಗಳು ವಾಲಗದ ಶಬ್ಧಕ್ಕೆ ಹೆದರಿ ರಂಪಾಟ ಮಾಡಿದವು. ಒಂದು ಕಡೆ ಎತ್ತುಗಳು ಬೆದರಿ ನಿಯಂತ್ರಣಕ್ಕೆ ಬಾರದ ಸಂದರ್ಭದಲ್ಲಿ ಇತ್ತ ಆನೆಗಳು ಕೂಡ ವಿಚಲಿತಗೊಂಡವು.
ಎತ್ತುಗಳು ಗಲಿಬಿಲಿಗೊಂಡ ಹಿನ್ನೆಲೆ ಯದುವೀರ್ ಅವರು ಪಟ್ಟದಕತ್ತಿಯನ್ನ ಕಂಚಿನ ಪಲ್ಲಕ್ಕಿಯಲ್ಲಿ ಇರಿಸಲು ಕೆಲಕಾಲ ಕಾದು ನಿಂತರು. ಎತ್ತುಗಳು ನಿಯಂತ್ರಣಕ್ಕೆ ಬಂದ ನಂತರ ರಾಜವಂಶಸ್ಥ ಯದುವೀರ್ ಸಂಪ್ರದಾಯ ಮುಗಿಸಿ ಕಾರಿನಲ್ಲಿ ಅರಮನೆಗೆ ಹಿಂದಿರುಗಿದರು.
ಈ ಮಧ್ಯೆ ಸಾಂಪ್ರದಾಯಿಕ ವಿಜಯಯಾತ್ರೆಯನ್ನ ರಾಜವಂಶಸ್ಥೆ ಪ್ರಮೊದದೇವಿ ಒಡೆಯರ್ ಹಾಗೂ ತ್ರಿಷಿಕಾ ಅವರು ಅರಮನೆ ಗ್ಯಾಲರಿಯಲ್ಲಿ ನಿಂತು ವೀಕ್ಷಿಸಿದರು.
Key words: Mysore Dasara-palace- vijayayatre-yaduveer-Elephants- threatened -oxen